ರಫೇಲ್ ಮಾತುಕತೆಯಲ್ಲಿ ಪ್ರಧಾನಿ ಕಾರ್ಯಾಲಯ ಮೂಗು ತೂರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು ರಕ್ಷಣಾ ಇಲಾಖೆ !
ಹೊಸದಿಲ್ಲಿ, ಫೆ. 8: ಬಹು ಕೋಟಿ ಮೊತ್ತದ ರಫೇಲ್ ಒಪ್ಪಂದಕ್ಕಾಗಿ ಭಾರತ ಮತ್ತು ಫ್ರಾನ್ಸ್ ನಡುವೆ ಮಾತುಕತೆಗಳು ಮುಂದುವರಿದ ಹಂತದಲ್ಲಿದ್ದಾಗ ಪ್ರಧಾನಿ ಕಾರ್ಯಾಲಯ ಮತ್ತು ಫ್ರಾನ್ಸ್ ನಡುವೆ ಪರ್ಯಾಯ ಮಾತುಕತೆಗಳು ನಡೆಯುತ್ತಿರುವುದಕ್ಕೆ ರಕ್ಷಣಾ ಸಚಿವಾಲಯ ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಧಾನಿ ಕಾರ್ಯಾಲಯದಿಂದ ಇಂತಹ ಪರ್ಯಾಯ ಮಾತುಕತೆಗಳು ''ರಕ್ಷಣಾ ಸಚಿವಾಲಯ ಮತ್ತು ಭಾರತೀಯ ತಂಡದ'' ಅಭಿಪ್ರಾಯಗಳನ್ನು ದುರ್ಬಲಗೊಳಿಸಿದಂತಾಗಿತ್ತು ಎಂದು 2015ರ ನವೆಂಬರ್ 24ರಂದು ಬರೆಯಲಾದ ರಕ್ಷಣಾ ಸಚಿವಾಲಯದ ಟಿಪ್ಪಣಿ ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಗಮನಕ್ಕೆ ತಂದಿತ್ತು ಎಂದು ದಿ ಹಿಂದು ಪತ್ರಿಕೆಯಲ್ಲಿ ಎನ್. ರಾಮ್ ವಿಶೇಷ ವರದಿ ಮಾಡಿದ್ದಾರೆ.
''ಭಾರತದ ಪರವಾಗಿ ಒಪ್ಪಂದದ ಮಾತುಕತೆ ನಡೆಸುವ ಅಧಿಕೃತ ತಂಡದ ಭಾಗವಾಗಿರುವ ಯಾವುದೇ ಅಧಿಕಾರಿಗಳು ಪರ್ಯಾಯ ಚರ್ಚೆಯನ್ನು ಫ್ರೆಂಚ್ ಸರಕಾರದ ಅಧಿಕಾರಿಗಳೊಂದಿಗೆ ನಡೆಸದಂತೆ ನಾವು ಪ್ರಧಾನಿ ಕಾರ್ಯಾಲಯಕ್ಕೆ ಸಲಹೆ ನೀಡಬಹುದು, ಒಂದು ವೇಳೆ ಪ್ರಧಾನಿ ಕಾರ್ಯಾಲಯಕ್ಕೆ ರಕ್ಷಣಾ ಸಚಿವಾಲಯ ನಡೆಸುವ ಚರ್ಚೆಗಳ ಪರಿಣಾಮದ ಬಗೆ ನಂಬಿಕೆಯಿಲ್ಲದೇ ಇದ್ದಲ್ಲಿ ಅಂತಹ ಸನ್ನಿವೇಶದಲ್ಲಿ ಪ್ರಧಾನಿ ಕಾರ್ಯಾಲಯದ ನೇತೃತ್ವದಲ್ಲಿ ಪರಿಷ್ಕೃತ ರೀತಿಯಲ್ಲಿ ಚರ್ಚೆಗಳು ಸೂಕ್ತ ಮಟ್ಟದಲ್ಲಿ ನಡೆಸಬಹುದು'' ಎಂದು ಆ ಟಿಪ್ಪಣಿ ಹೇಳಿತ್ತು.
ಆದರೆ ಭಾರತ ಸರಕಾರವು ಸುಪ್ರೀಂ ಕೋರ್ಟಿಗೆ ಅಕ್ಟೋಬರ್ 2018ರಲ್ಲಿ ನೀಡಿದ ಮಾಹಿತಿಯಂತೆ ರಫೇಲ್ ಒಪ್ಪಂದದ ಕುರಿತಾದ ಚರ್ಚೆಗಳನ್ನು ವಾಯುಸೇನೆಯ ಡೆಪ್ಯುಟಿ ಚೀಫ್ ನೇತೃತ್ವದ ಏಳು ಮಂದಿ ಸದಸ್ಯರ ತಂಡ ನಡೆಸಿತ್ತು. ಚರ್ಚೆಗಳಲ್ಲಿ ಪ್ರಧಾನಿ ಕಾರ್ಯಾಲಯದ ಪಾತ್ರದ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ.
ಪ್ರಧಾನಿ ಕಾರ್ಯಾಲಯದ ನಿಲುವು ತನ್ನ ನಿಲುವಿಗೆ ಹಾಗೂ ಒಪ್ಪಂದದ ಬಗ್ಗೆ ಚರ್ಚೆ ನಡೆಸಲು ಇದ್ದ ಅಧಿಕೃತ ತಂಡದ ನಿಲುವಿಗೆ ವಿರುದ್ಧವಾಗಿತ್ತು ಎಂದು ರಕ್ಷಣಾ ಸಚಿವಾಲಯವು ತನ್ನ ತೀವ್ರ ಆಕ್ಷೇಪ ಸೂಚಿಸಿತ್ತು ಎಂದು ತನಗೆ ಲಭ್ಯವಿರುವ ದಾಖಲೆಗಳು ತಿಳಿಸುತ್ತವೆ ಎಂದು ದಿ ಹಿಂದು ವರದಿ ತಿಳಿಸಿದೆ.
ಪ್ರಧಾನಿ ಕಾರ್ಯಾಲಯವು ರಫೇಲ್ ಒಪ್ಪಂದದ ಕುರಿತಂತೆ ನಡೆಸಿದ ಪರ್ಯಾಯ ಮಾತುಕತೆಗಳ ಬಗ್ಗೆ ಸಚಿವಾಲಯಕ್ಕೆ ಫ್ರೆಂಚ್ ತಂಡದ ಮುಖ್ಯಸ್ಥ ಜನರಲ್ ಸ್ಟೀಫನ್ ರೆಬ್ ಅವರು ಅಕ್ಟೋಬರ್ 23, 2015ರಂದು ಬರೆದ ಪತ್ರದ ಮುಖಾಂತರ ತಿಳಿದಿತ್ತು.''ಪ್ರಧಾನಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿ ಜಾವೇದ್ ಅಶ್ರಫ್ ಹಾಗೂ ಫ್ರೆಂಚ್ ರಕ್ಷಣಾ ಸಚಿವರ ರಾಜತಾಂತ್ರಿಕ ಸಲಹೆಗಾರ ಲೂಯಿಸ್ ವಸ್ಸಿ ನಡುವೆ ಅಕ್ಟೋಬರ್ 20, 2015ರಂದು ನಡೆದ ಟೆಲಿಫೋನ್ ಸಂಭಾಷಣೆಯ ಬಗ್ಗೆ ಆ ಪತ್ರ ಉಲ್ಲೇಖಿಸಿತ್ತು.
ಈ ಬಗ್ಗೆ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೊಲ್ಲೆಂಡೆ ಅವರಲ್ಲಿ ಸೆಪ್ಟೆಂಬರ್ 2018ರಲ್ಲಿ ಪತ್ರಿಕೆಯೊಂದು ಕೇಳಿದಾಗ ರಫೇಲ್ ಒಪ್ಪಂದದ ಕುರಿತಾದ ಮಾತುಕತೆಗಳ `ಹೊಸ ಸೂತ್ರ'ದನ್ವಯ ರಿಲಯನ್ಸ್ ಗ್ರೂಪ್ ಹೆಸರು ಸೂಚಿಸಲಾಗಿತ್ತು ಎಂದಿದ್ದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಜನವರಿ 2016ರಲ್ಲಿ ಫ್ರಾನ್ಸ್ ಜತೆ ಪರ್ಯಾಯ ಮಾತುಕತೆ ನಡೆಸಿದ್ದ ಬಗ್ಗೆಯೂ ದಾಖಲೆಗಳು ಇವೆ ಎಂದು ವರದಿ ತಿಳಿಸಿದೆ.
ಸಾವರಿನ್ ಅಥವಾ ಬ್ಯಾಂಕ್ ಗ್ಯಾರಂಟಿ ಅಗತ್ಯವಿಲ್ಲ ಎಂದು ದೋವಲ್ ಅವರು ಪರಿಕ್ಕರ್ ಗೆ ಸಲಹೆ ನೀಡಿರುವ ಬಗ್ಗೆಯೂ ಆಗಿನ ರಕ್ಷಣಾ ಸಚಿವರು ಟಿಪ್ಪಣಿ ಮಾಡಿದ್ದಾರೆನ್ನಲಾಗಿದೆ.
ಬಹಳಷ್ಟು ಚರ್ಚೆಯ ನಂತರ ಅಂತಿಮಗೊಳಿಸಲಾಗಿದ್ದ ಮೂಲ ರಫೇಲ್ ಒಪ್ಪಂದಕ್ಕಿಂತ ಬಹುತೇಕ ಭಿನ್ನವಾಗಿದ್ದ ಹೊಸ ರಫೇಲ್ ಒಪ್ಪಂದವನ್ನು ಪ್ರಧಾನಿ ಮೋದಿ ಎಪ್ರಿಲ್ 2015ರಂದು ತಮ್ಮ ಪ್ಯಾರಿಸ್ ಭೇಟಿಯ ವೇಳೆ ಘೋಷಿಸಿದ್ದರು. ಆಗಿನ ಅಧ್ಯಕ್ಷ ಹಾಲ್ಲೆಂಡೆ 2016ರ ಗಣತಂತ್ರ ದಿವಸ ಸಮಾರಂಭಕ್ಕೆ ಆಗಮಿಸಿದ್ದ ಸಂದರ್ಭ ಎಂಒಯು ಗೆ ಸಹಿ ಹಾಕಲಾಗಿದ್ದರೆ ಮುಂದೆ 36 ರಫೇಲ್ ಜೆಟ್ ಖರೀದಿಗೆ ಅಂತರ್-ಸರಕಾರಿ ಒಪ್ಪಂದಕ್ಕೆ ಸೆಪ್ಟೆಂಬರ್ 23, 2016ರಂದು ಸಹಿ ಹಾಕಲಾಗಿತ್ತು.