ರಫೇಲ್ ಒಪ್ಪಂದ ಪ್ರಶ್ನಿಸುವವರಿಗೆ ದೇಶದ್ರೋಹಿ ಪಟ್ಟ ಕಟ್ಟುವುದೇಕೆ? ಬಿಜೆಪಿಗೆ ಶಿವಸೇನೆ ಪ್ರಶ್ನೆ
ಮುಂಬೈ, ಫೆ.9: ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಪ್ರಧಾನಮಂತ್ರಿ ಕಚೇರಿ(ಪಿಎಂಒ)ಭಾಗಿಯಾಗಿದೆ ಎಂಬ ಇಂಗ್ಲೀಷ್ ದಿನಪತ್ರಿಕೆಯ ವಿಸ್ತ್ರತ ಲೇಖನವನ್ನು ಉಲ್ಲೇಖಿಸಿರುವ ಶಿವಸೇನೆ, ಬಹುಕೋಟಿ ಒಪ್ಪಂದವನ್ನು ಪ್ರಶ್ನಿಸುವವರನ್ನು ದ್ವೇಷಿಸುತ್ತಿರುವ ಮಿತ್ರಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
‘‘ರಫೇಲ್ ಒಪ್ಪಂದವನ್ನು ಬೆಂಬಲಿಸುವವರು ದೇಶಭಕ್ತರು ಹಾಗೂ ವಿರೋಧಿಸುವವರು ದೇಶದ್ರೋಹಿಗಳು ಆಗುವುದು ಹೇಗೆ? ತೃಪ್ತಿಕರ ಉತ್ತರ ಬರುವ ತನಕ ಪ್ರತಿ ಭಾರತೀಯನೂ ಪ್ರಶ್ನೆ ಕೇಳುತ್ತಲೇ ಇರುತ್ತಾನೆ’’ ಎಂದು ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಶನಿವಾರ ಶಿವಸೇನೆ ಅಭಿಪ್ರಾಯಪಟ್ಟಿದೆ.
‘‘ಸತ್ಯಮೇವ ಜಯತೇ ಘೋಷಣೆ ಈ ದೇಶವನ್ನು ಜೀವಂತವಾಗಿಸಿದೆ. ವಿಪಕ್ಷಗಳು ಸಾಯುತ್ತವೆ. ಆದರೆ, ಸತ್ಯ ಜೀವಂತವಾಗಿರುತ್ತದೆ. ನೀವು ಏಕೆ ಅನಗತ್ಯವಾಗಿ ವಿಪಕ್ಷಗಳನ್ನು ದೂಷಿಸುತ್ತೀರಿ?ಪ್ರಧಾನಿ ಮೋದಿ ಸಂಸತ್ತಿನಲ್ಲಿ ರಫೇಲ್ ಒಪ್ಪಂದವನ್ನು ಸಮರ್ಥಿಸಿಕೊಂಡರು. ಆದರೆ, ಮರುದಿನವೇ ಇಂಗ್ಲೀಷ್ ದಿನಪತ್ರಿಕೆಯು ಒಪ್ಪಂದದ ಬಗ್ಗೆ ಕಪ್ಪುಪುಟವನ್ನ ಪ್ರಕಟಿಸಿತು. ದೇಶಪ್ರೇಮಿಗಳು ವೌನವಾಗಿದ್ದರು. ಇಂಗ್ಲೀಷ್ ದಿನಪತ್ರಿಕೆ ಸಂಪೂರ್ಣ ಸತ್ಯ ಹೇಳಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ರಾಹುಲ್ ಗಾಂಧಿಯವರ ಆರೋಪವೇನು?ವಿರೋಧ ಪಕ್ಷಗಳನ್ನು ನೀವು ಅನಗತ್ಯವಾಗಿ ದೂಷಿಸುವುದೇಕೆ? ಎಂದು ಶಿವಸೇನೆ ಪ್ರಶ್ನಿಸಿದೆ.
ಇಂದು ‘ಚೋಕಿದಾರ್ ಚೋರ್ ಹೈ’ ಎಂಬ ಮಾತು ದೇಶದಲ್ಲಿ ಜನಪ್ರಿಯವಾಗಿದೆ. ಇದು ಕಾಂಗ್ರೆಸ್ ಮೂಲಕ ಜನಪ್ರಿಯವಾಗಿಲ್ಲ. ಪ್ರಧಾನಿ ದೇಶಕ್ಕೆ ಕೆಲವು ವಿಚಾರ ಅಡಗಿಸಿಡುವ ಮೂಲಕ ಈ ಮಾತು ಹೆಚ್ಚು ಪ್ರಸಿದ್ದಿಯಾಗಿದೆ. ತನಗೆ ಸಮಾಧಾನಕರ ಉತ್ತರ ಸಿಗುವ ತನಕವೂ ದೇಶದ ಪ್ರತಿ ಪ್ರಜೆಯೂ ಪ್ರಶ್ನಿಸುತ್ತಿರುತ್ತಾನೆ. ಬಿಜೆಪಿಯನ್ನು ಟೀಕಿಸಿ, ಮೋದಿಯನ್ನು ಟೀಕಿಸಿ ಆದರೆ,ದೇಶವನ್ನು ಟೀಕಿಸಬೇಡಿ ಎಂದು ಮೋದಿ ಹೇಳುತ್ತಾರೆ. ಇದರ ಅರ್ಥ ಏನೆಂದು ಮೋದಿ ಭಕ್ತರು ಉತ್ತರಿಸಬೇಕಾಗಿದೆ ಎಂದು 'ಸಾಮ್ನಾ'ದಲ್ಲಿ ಬರೆಯಲಾಗಿದೆ.