'ಟ್ರೈನ್-18' ಯಾನಿಗಳಿಗೆ ಬಗೆ ಬಗೆಯ ಖಾದ್ಯದ ಸವಿ
ಹೊಸದಿಲ್ಲಿ, ಫೆ. 13: ಉಪಾಹಾರಕ್ಕೆ ಮಫಿನ್ ಮತ್ತು ಡೊನಟ್ಸ್ (ಒಂದು ಬಗೆಯ ಕೇಕ್), ಅಲಹಾಬಾದ್ ರೆಸ್ಟೋರೆಂಟ್ನ ಬಿಸಿ ಬಿಸಿ ಹಬೆಯಾಡುವ ಊಟ, ಕಾನ್ಪುರದ ಪಂಚತಾರಾ ಹೋಟೆಲ್ನ ರಾತ್ರಿಯೂಟವನ್ನು ಸವಿಯುವ ಅವಕಾಶ ಟ್ರೈನ್-18 ಯಾನಿಗಳಿಗೆ ಸಿಗಲಿದೆ.
ಪ್ರಧಾನಿ ನರೇಂದ್ರ ಮೋದಿ ಫೆ. 15ರಂದು ಚಾಲನೆ ನೀಡಲಿರುವ ದೆಹಲಿ- ವಾರಣಾಸಿ ರೈಲಿನಲ್ಲಿ ಈ ಸೌಲಭ್ಯಗಳನ್ನು ಅಳವಡಿಸಲು ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ನಿರ್ಧರಿಸಿದೆ.
ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ಸರಬರಾಜು ಮಾಡುವ ಆಹಾರದ ಗುಣಮಟ್ಟವನ್ನು ಸುಧಾರಿಸುವ ಪ್ರಯತ್ನವಾಗಿ ಆಹಾರ ಪೂರೈಕೆ ವ್ಯವಸ್ಥೆಯನ್ನು ಹೊರಗುತ್ತಿಗೆ ನೀಡಲು ಐಆರ್ಸಿಟಿಸಿ ಮುಂದಾಗಿದೆ.
ಕಾನ್ಪುರದ ಪಂಚತಾರಾ ಹೋಟೆಲ್ ಜತೆಗೆ ಒಪ್ಪಂದ ಮಾಡಿಕೊಂಡು ರಾತ್ರಿಯೂಟವನ್ನು ಅಲ್ಲಿಂದ ಪಡೆಯಲಾಗುತ್ತದೆ. ವಾರಣಾಸಿಯಿಂದ ಹೊಸದಿಲ್ಲಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕಾನ್ಪುರದ ಬಳಿಕ ರಾತ್ರಿಯೂಟ ಸರಬರಾಜು ಮಾಡಲಾಗುತ್ತದೆ. ದೆಹಲಿಯಿಂದ ವಾರಣಾಸಿಗೆ ತೆರಳುವ ಪ್ರಯಾಣಿಕರಿಗೆ ಮಧ್ಯಾಹ್ನದೂಟವನ್ನು ಅಲಹಾಬಾದ್ನಲ್ಲಿ ಪೂರೈಸಲಾಗುತ್ತದೆ. ಆಹಾರ ಮಳಿಗೆಯನ್ನು ಇನ್ನೂ ಅಂತಿಮಪಡಿಸಿಲ್ಲ. ಆದರೆ ಉತ್ತಮ ಬ್ರಾಂಡ್ ಆಯ್ಕೆ ಮಾಡಲಾಗುತ್ತದೆ" ಎಂದು ಐಆರ್ಸಿಟಿಸಿ ಮೂಲಗಳು ಹೇಳಿವೆ.
ಆಹಾರವನ್ನು ವಿತರಿಸುವವರೆಗೂ ಅದು ಬಿಸಿ ಇರುವಂತೆ ಅದನ್ನು ಪ್ಯಾಕ್ ಮಾಡಲಾಗುತ್ತದೆ. ಇದನ್ನು ಒದಗಿಸುವ ಸಿಬ್ಬಂದಿಗೆ ಕೂಡಾ ವಿಶೇಷ ತರಬೇತಿ ನೀಡಲಾಗಿದೆ. ಭಾರತೀಯ ರೈಲ್ವೆ ಉಪಾಹಾರವಾದ ಕಟ್ಲೆಟ್ ಹಾಗೂ ಬ್ರೆಡ್ ಬದಲಾಗಿ, ಈ ರೈಲಿನಲ್ಲಿ ಪ್ಯಾಟೀಸ್, ಮಫಿನ್ ಹಾಗೂ ಡೋನಟ್ಸ್ ಪೂರೈಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಸುಮಾರು ಎಂಟು ಗಂಟೆಯ ದೆಹಲಿ- ವಾರಣಾಸಿ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಉಪಾಹಾರ, ಮಧ್ಯಾಹ್ನದೂಟ ಹಾಗೂ ಲಘು ಉಪಾಹಾರ ವಿತರಿಸಲಾಗುತ್ತದೆ. ಕಳೆದ ವರ್ಷ ಪ್ರಾಯೋಗಿಕ ಸಂಚಾರ ನಡೆದಿದ್ದು, ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಈ ರೈಲು ದೇಶದ ಅತಿವೇಗದ ರೈಲು ಎನಿಸಿಕೊಂಡಿದೆ. ಎಕ್ಸಿಕ್ಯೂಟಿವ್ ಕ್ಲಾಸ್ಗೆ 3310 ರೂಪಾಯಿ ಹಾಗೂ ಚೇರ್ ಕಾರ್ಗೆ 1760 ರೂಪಾಯಿ ದರ ನಿಗದಿಪಡಿಸಲಾಗಿದೆ.