ಆಸ್ಕರ್ ನಲ್ಲಿ ಮಿಂಚಿದ ಭಾರತದ ಚಿತ್ರ
ಲಾಸ್ ಏಂಜಲಿಸ್, ಫೆ. 25: ಡಾಲ್ಬಿ ಥಿಯೇಟರ್ನಲ್ಲಿ ಸೋಮವಾರ ನಡೆದ 91ನೇ ಆವೃತ್ತಿಯ ಅಕಾಡಮಿ ಪ್ರಶಸ್ತಿಯಲ್ಲಿ ಭಾರತದ ‘ಪೀರಿಯಡ್. ಎಂಡ್ ಆಫ್ ಸೆಂಟೆನ್ಸ್’ ಹೆಸರಿನ ಕಿರು ಚಿತ್ರ ಡಾಕ್ಯುಮೆಂಟರಿ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಭಾರತ ಒಂದು ದಶಕದ ಬಳಿಕ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. 2009ರಲ್ಲಿ ಸಂಗೀತ ನಿರ್ದೇಶಕ ಎಆರ್ ರಹ್ಮಾನ್ ಹಾಗೂ ಸೌಂಡ್ ಇಂಜಿನಿಯರ್ ರೆಸುಲ್ ಪೂಕುಟ್ಟಿ ‘ಸ್ಲಂಡಾಗ್ ಮಿಲಿಯನೇರ್ ’ಚಿತ್ರಕ್ಕೆ ಪ್ರಶಸ್ತಿ ಪಡೆದುಕೊಂಡಿದ್ದರು.
ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕಿ ರೆಕಾ ಝಹತಾಬ್ಜಿ ಕಿರು ಚಿತ್ರದ ನಿರ್ದೇಶನ ಮಾಡಿದ್ದು, ಭಾರತದ ಗುನೀತ್ ಮೊಂಗಾ ಚಿತ್ರ ನಿರ್ಮಾಣ ಮಾಡಿದ್ದರು.
‘‘ಋತುಚಕ್ರಕ್ಕೆ ಕುರಿತಾದ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿದೆ ಎಂಬ ವಿಚಾರ ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಫೆಮಿನಿಸ್ಟ್ ಮೆಜಾರಿಟಿ ಫೌಂಡೇಶನ್ಗೆ ಈ ಪ್ರಶಸ್ತಿ ಅರ್ಪಿಸುವೆ. ವಿಶ್ವದೆಲ್ಲೆಡೆ ಇರುವ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳಿಗೆ ಅರ್ಪಿಸುವೆ. ಋತುಚಕ್ರ ಬಾಲಕಿಯರ ಶಿಕ್ಷಣಕ್ಕೆ ಧಕ್ಕೆಯಾಗಬಾರದು’’ ಎಂದು ಪ್ರಶಸ್ತಿ ಸ್ವೀಕರಿಸಿದ ರೆಕಾ ಹೇಳಿದ್ದಾರೆ.
ದಿಲ್ಲಿ ಹೊರ ವಲಯ ಹಾಪುರ್ ಹಳ್ಳಿಯಲ್ಲಿ ಋತುಚಕ್ರದ ಬಗ್ಗೆ ಆಳವಾಗಿ ಬೇರೂರಿರುವ ಕಳಂಕದ ವಿರುದ್ದ ಮಹಿಳೆಯರು ನಡೆಸಿದ್ದ ಕ್ರಾಂತಿ ಕುರಿತು ಈ ಕಿರುಚಿತ್ರ ರಚಿಸಲಾಗಿದೆ. ಈ ಹಳ್ಳಿಯಲ್ಲಿ ಹಲವು ವರ್ಷಗಳಿಂದ ಮಹಿಳೆಯರು ಸ್ಯಾನಿಟರಿ ಪ್ಯಾಡ್ಗಳನ್ನು ಬಳಸದ ಕಾರಣ ಮಹಿಳೆಯರಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆ ಹಾಗೂ ಹುಡುಗಿಯರು ಶಾಲೆಯಿಂದ ಹೊರಗುಳಿಯಬೇಕಾದ ಸಮಸ್ಯೆಯನ್ನು ತಲೆತಲಾಂತರದಿಂದ ಎದುರಿಸುತ್ತಿದ್ದರು.
ಈಗ ಹಳ್ಳಿಯಲ್ಲಿ ಸ್ಯಾನಿಟರಿ ಪ್ಯಾಡ್ ಮಾರಾಟ ಮಳಿಗೆಯನ್ನು ತೆರೆಯಲಾಗಿದ್ದು, ಮಹಿಳೆಯರು ಇದನ್ನು ತಯಾರಿಸಿ ತಮ್ಮದೇ ಮಾರುಕಟ್ಟೆ ನಿರ್ಮಿಸಿಕೊಂಡಿದ್ದಾರೆ.