ಹಂತಕನನ್ನು ದ್ವೇಷಿಸುವ ಬದಲು ಅವನನ್ನು ಕ್ಷಮಿಸಿಬಿಡಿ ಎಂದ ಪತ್ನಿಯನ್ನು ಕಳೆದುಕೊಂಡ ಸಂತ್ರಸ್ತ
ನ್ಯೂಝಿಲ್ಯಾಂಡ್ ಮಸೀದಿ ಮೇಲೆ ಭಯೋತ್ಪಾದಕ ದಾಳಿ
ಕ್ರೈಸ್ಟ್ ಚರ್ಚ್, ಮಾ.17: ನ್ಯೂಝಿಲ್ಯಾಂಡ್ ನ ಮಸೀದಿಯಲ್ಲಿ ಗುಂಡಿನ ದಾಳಿ ನಡೆಸಿ, 50 ಮಂದಿಯ ಸಾವಿಗೆ ಕಾರಣನಾದ ಉಗ್ರನ ಬಗ್ಗೆ ದ್ವೇಷ ಸಾಧನೆಯ ಬದಲು ಆತನನ್ನು ಕ್ಷಮಿಸುವುದು ನಮ್ಮ ಮುಂದಿರುವ ಉತ್ತಮ ಮಾರ್ಗ ಎಂದು ಘಟನೆಯಲ್ಲಿ ಪತ್ನಿಯನ್ನು ಕಳೆದುಕೊಂಡ ಸಂತ್ರಸ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
"ನಿನ್ನನ್ನು ವ್ಯಕ್ತಿಯಾಗಿ ನಾನು ಪ್ರೀತಿಸುತ್ತೇನೆ" ಎಂದು ಹೇಳಬಯಸುತ್ತೇನೆ ಎಂದು ಎಎಫ್ಪಿ ಜತೆ ಮಾತನಾಡಿದ ಫರೀದ್ ಅಹ್ಮದ್ ಹೇಳಿದರು. "ಆತನ ಕೃತ್ಯವನ್ನು ನಾನು ಒಪ್ಪುವುದಿಲ್ಲ; ಆತ ಮಾಡಿದ್ದು ತಪ್ಪು" ಎಂದು ಸ್ಪಷ್ಟಪಡಿಸಿದರು.
28 ವರ್ಷದ ಹಂತಕನನ್ನು ಕ್ಷಮಿಸುತ್ತೀರಾ ಎಂದು ಹೇಳಿದಾಗ, "ಖಂಡಿತವಾಗಿಯೂ ಒಳ್ಳೆಯ ಮಾರ್ಗವೆಂದರೆ ಕ್ಷಮೆ. ಉದಾರತೆ, ಪ್ರೀತಿ, ಕಾಳಜಿ ಮತ್ತು ಧನಾತ್ಮಕತೆ" ಎಂದು ಪ್ರತಿಕ್ರಿಯಿಸಿದರು.
ಘಟನೆಯಲ್ಲಿ ಮೃತಪಟ್ಟ 50 ಮಂದಿಯ ಪೈಕಿ ಇವರ ಪತ್ನಿ ಹನ್ಸಾ ಅಹ್ಮದ್ (44) ಕೂಡಾ ಒಬ್ಬರು. ಒಟ್ಟು ನಾಲ್ಕು ಮಂದಿ ಮಹಿಳೆಯರು ಬಲಿಯಾಗಿದ್ದಾರೆ. ಶೂಟಿಂಗ್ ಆರಂಭವಾದಾಗ ಹಲವು ಮಂದಿ ಮಕ್ಕಳು ಹಾಗೂ ಮಹಿಳೆಯರು ತಪ್ಪಿಸಿಕೊಳ್ಳಲು ಅವರು ನೆರವಾಗಿದ್ದರು.