ಆಕ್ರಮಿತ ಪ್ರದೇಶದಿಂದ ಇಸ್ರೇಲ್ ತೆರವಿಗೆ ಅಂತರ್ರಾಷ್ಟ್ರೀಯ ಸಮುದಾಯದ ನೆರವು ಅಗತ್ಯ: ವಿಶ್ವಸಂಸ್ಥೆ ತನಿಖಾಧಿಕಾರಿ
ವಿಶ್ವಸಂಸ್ಥೆ, ಜು. 12: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಇನ್ನಷ್ಟು ಮನೆಗಳನ್ನು ನಿರ್ಮಿಸುವುದನ್ನು ಹಾಗೂ ಈ ಪ್ರದೇಶವನ್ನು ಔಪಚಾರಿಕವಾಗಿ ಇಸ್ರೇಲ್ನೊಂದಿಗೆ ಸೇರಿಸುವ ಯಾವುದೇ ಪ್ರಯತ್ನಗಳನ್ನು ತಡೆಯಲು ಅಂತರ್ರಾಷ್ಟ್ರೀಯ ಸಮುದಾಯ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ವಿಶ್ವಸಂಸ್ಥೆಯ ತನಿಖಾಧಿಕಾರಿಯೊಬ್ಬರು ಪಟ್ಟಿ ಮಾಡುತ್ತಿದ್ದಾರೆ.
ತಾನು ಸ್ವತಂತ್ರ ದೇಶವಾಗಬೇಕೆಂಬ ಫೆಲೆಸ್ತೀನ್ನ ಬಯಕೆಯನ್ನು ಬೆಂಬಲಿಸಲು ಐರೋಪ್ಯ ಒಕ್ಕೂಟ ಮತ್ತು ಇತರ ಜಾಗತಿಕ ಪ್ರಭಾವಿ ದೇಶಗಳು ಇಸ್ರೇಲ್ನೊಂದಿಗಿನ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬಾಂಧವ್ಯಗಳನ್ನು ಕಡಿಮೆ ಮಾಡುವ ಬಗ್ಗೆ ಪರಿಶೀಲಿಸಬೇಕು ಎಂದು ವಿಶ್ವಸಂಸ್ಥೆಯ ಸ್ವತಂತ್ರ ಸಂಶೋಧಕ ಮೈಕಲ್ ಲಿಂಕ್ ಹೇಳಿದ್ದಾರೆ.
‘‘ಮಾನವಹಕ್ಕುಗಳ ಸಾರಾಸಗಟು ಉಲ್ಲಂಘನೆಗಳನ್ನು ನಡೆಸುತ್ತಿರುವ ದೇಶಗಳಿಗೆ ಸಾಮಾನ್ಯವಾಗಿ ಬಳಸಲಾಗುತ್ತಿರುವ ಪ್ರತಿಕ್ರಮಗಳನ್ನು ಅಂತರ್ರಾಷ್ಟ್ರೀಯ ಸಮುದಾಯ ಪರಿಶೀಲಿಸಬೇಕು ಹಾಗೂ ಇಸ್ರೇಲ್ ವಿಷಯದಲ್ಲಿ ಬಳಸಲು ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಬೇಕು’’ ಎಂದು ಅಲ್ ಜಝೀರ ಟಿವಿ ಚಾನೆಲ್ನೊಂದಿಗೆ ಮಾತನಾಡಿದ ಲಿಂಕ್ ಹೇಳಿದರು.
‘‘ಇಸ್ರೇಲ್ ಜೊತೆ ವ್ಯವಹರಿಸಲು ಅಂತರ್ರಾಷ್ಟ್ರೀಯ ಸಮುದಾಯಕ್ಕೆ ಹಲವಾರು ಆಯ್ಕೆಗಳಿವೆ. ‘ನಿಮ್ಮ ಆಕ್ರಮಣದಿಂದ ಹಿಂದೆ ಸರಿಯಲು ನೀವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡದಿದ್ದರೆ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬಾಂಧವ್ಯಗಳಿಗೆ ಸಂಬಂಧಿಸಿ ನಿಮ್ಮಾಂದಿಗೆ ಮಾಡಿಕೊಳ್ಳಲಾಗಿರುವ ಒಪ್ಪಂದಗಳ ಮೂಲಕ ನಿಮಗೆ ನೀಡಲಾಗಿರುವ ಸ್ಥಾನಮಾನವನ್ನು ಮರುಪರಿಶೀಲಿಸಲಾಗುವುದು’’ ಎಂಬುದಾಗಿ ಅದು ಇಸ್ರೇಲ್ಗೆ ಹೇಳಬೇಕು’’ ಎಂದು ಲಿಂಕ್ ಹೇಳಿದರು.