“ಅಫ್ಘಾನ್ನಲ್ಲಿ ಅಮೆರಿಕ ಸೈನಿಕರ ಸಂಖ್ಯೆ ಕಡಿತಕ್ಕೆ ಟ್ರಂಪ್ ಉತ್ಸುಕ”
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ
ವಾಶಿಂಗ್ಟನ್, ಜು. 30: ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಯ ವೇಳೆಗೆ ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ಯುದ್ಧನಿರತ ಸೈನಿಕರ ಸಂಖ್ಯೆಯನ್ನು ಕಡಿಮೆಗೊಳಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೋಮವಾರ ಹೇಳಿದ್ದಾರೆ.
‘‘ಇದು ನನಗೆ ಅಧ್ಯಕ್ಷರು ನೀಡಿದ ಸೂಚನೆಯಾಗಿದೆ’’ ಎಂದು ಎಕನಾಮಿಕ್ ಕ್ಲಬ್ ಆಫ್ ವಾಶಿಂಗ್ಟನ್ಗೆ ಪಾಂಪಿಯೊ ಹೇಳಿದ್ದಾರೆ.
2020 ನವೆಂಬರ್ ಚುನಾವಣೆಯ ಮೊದಲು ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ಸೈನಿಕರ ಸಂಖ್ಯೆಯನ್ನು ಟ್ರಂಪ್ ಕಡಿಮೆ ಮಾಡಬೇಕೆಂದು ನೀವು ನಿರೀಕ್ಷಿಸುತ್ತೀರಾ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
‘‘ಈ ವಿಷಯದಲ್ಲಿ ಅವರದು ಸ್ಪಷ್ಟ ನಿಲುವು: ಕೊನೆಯಿಲ್ಲದ ಯುದ್ಧಗಳನ್ನು ನಿಲ್ಲಿಸಿ, ಸೈನಿಕರ ಸಂಖ್ಯೆಯನ್ನು ಕಡಿತಗೊಳಿಸಿ’’ ಎಂದರು. ‘‘ಈ ವಲಯದಲ್ಲಿ ಯುದ್ಧದಲ್ಲಿ ತೊಡಗುವ ಪಡೆಗಳ ಅಗತ್ಯದಲ್ಲಿ ಒಟ್ಟಾರೆ ಇಳಿಕೆಯಾಗಿದೆ ಎಂದು ನಾವು ಭಾವಿಸುತ್ತೇವೆ’’ ಎಂದು ಪಾಂಪಿಯೊ ನುಡಿದರು.
ತಾಲಿಬಾನ್ನೊಂದಿಗೆ ಇನ್ನೊಂದು ಸುತ್ತಿನ ಮಾತುಕತೆಗಳನ್ನು ನಡೆಸಲು ಅಮೆರಿಕ ಸಿದ್ಧತೆಗಳನ್ನು ನಡೆಸುತ್ತಿರುವ ಹಂತದಲ್ಲಿ ಪಾಂಪಿಯೊ ಈ ಹೇಳಿಕೆ ನೀಡಿದ್ದಾರೆ.
► ಅಫ್ಘಾನ್: ಇಬ್ಬರು ಅಮೆರಿಕ ಸೈನಿಕರ ಸಾವು
ಅಫ್ಘಾನಿಸ್ತಾನದಲ್ಲಿ ಸೋಮವಾರ ಇಬ್ಬರು ಅಮೆರಿಕ ಸೈನಿಕರು ಮೃತಪಟ್ಟಿದ್ದಾರೆ ಎಂದು ‘ನ್ಯಾಟೊ’ ಹೇಳಿದೆ.
ಅಫ್ಘಾನಿಸ್ತಾನದಲ್ಲಿ 18 ವರ್ಷಗಳ ಸುದೀರ್ಘ ಕಾಲ ನಡೆದ ಯುದ್ಧವನ್ನು ನಿಲ್ಲಿಸಲು ಅಮೆರಿಕ ಪ್ರಯತ್ನಗಳನ್ನು ನಡೆಸುತ್ತಿರುವ ಸಮಯದಲ್ಲೇ ಈ ಸಾವುಗಳು ಸಂಭವಿಸಿವೆ.
ಇದರೊಂದಿಗೆ ಈ ವರ್ಷ ಅಫ್ಘಾನಿಸ್ತಾನದಲ್ಲಿ ಯುದ್ಧದಲ್ಲಿ ಮೃತಪಟ್ಟ ಅಮೆರಿಕ ಸೈನಿಕರ ಸಂಖ್ಯೆ 12ಕ್ಕೇರಿದೆ.