ಬ್ರಾಹ್ಮಣರು ಕೀಳರಿಮೆಯಿಂದ ಹೊರಬರಲಿ: ಪ್ರೊ.ಯಡಪಡಿತ್ತಾಯ
ಉಡುಪಿ, ಅ.29: ಬ್ರಾಹ್ಮಣಿಕೆಯ ಮೂಲಕ ಮಾನವೀಯತೆ ಮೆರೆದರೆ ಉತ್ತಮ ಬ್ರಾಹ್ಮಣರಾಗಲು ಸಾಧ್ಯ. ಬ್ರಾಹ್ಮಣರು ಕೀಳರಿಮೆಯಿಂದ ಹೊರ ಬಂದು ತನ್ನಲ್ಲಿರುವ ಅಗಾಧ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಹೇಳಿದ್ದಾರೆ.
ಉಡುಪಿ ಸೌತ್ ಕೆನರಾ ಕಾಸರಗೋಡು ದ್ರಾವಿಡ ಬ್ರಾಹ್ಮಣ ಎಜ್ಯುಕೇಶನ್ ಸೊಸೈಟಿ ವತಿಯಿಂದ ಉಡುಪಿಯ ಅದಮಾರು ಮಠದ ಗೆಸ್ಟ್ ಹೌಸ್ನಲ್ಲಿ ಮಂಗಳವಾರ ಆಯೋಜಿಸಲಾದ ಬ್ರಾಹ್ಮಣ ಸಮುದಾಯದವರಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂದಲ್ಲಿ ಅವರು ಮಾತನಾಡುತಿದ್ದರು.
ಜೀವನದಲ್ಲಿ ಯಶಸ್ಸು ಕಾಣಲು ಗುರುಗಳ ಮಾರ್ಗದರ್ಶನ, ನಿರ್ದಿಷ್ಟ ಜೀವನ ಗುರಿ, ಯೋಗ್ಯತೆ, ದೈವಿಶಕ್ತಿ ಹಾಗೂ ಮನೋಸ್ಥೈರ್ಯ ಬಹಳ ಮುಖ್ಯವಾಗಿದೆ. ಇನ್ನೊಬ್ಬರನ್ನು ಕ್ಷುಲ್ಲಕವಾಗಿ ನೋಡದೆ, ಇಚ್ಛಾಶಕ್ತಿ, ಸಾಧಿಸುವ ಛಲ ಹಾಗೂ ಭಗವಂತನ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಬದ್ಧತೆ, ಶ್ರಮ, ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು ಎಂದರು.
ಒಕ್ಕಲಿಗರು, ಲಿಂಗಾಯಿತರಲ್ಲಿ ಇರುವ ಒಗ್ಗಟ್ಟು ಬ್ರಾಹ್ಮಣರಲ್ಲಿ ಇಲ್ಲ. ಹಾಗಾಗಿ ನಮ್ಮ ಶಕ್ತಿ ಸಮಾಜದಲ್ಲಿ ಕಾಣುವುದಿಲ್ಲ. ಇದಕ್ಕೆ ನಾವೇ ಕಾರಣರು ಹೊರತು ಹೊರಗಿನವರಲ್ಲ. ನಮ್ಮ ಆತ್ಮಶೋಧನೆ ಮಾಡಬೇಕು. ನಾವು ಭೇದಭಾವ ಮಾಡದೆ, ರಾಜಕೀಯವಾಗಿ ಬೆಳೆಯಲು ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು.
ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ವಿದ್ಯಾರ್ಥಿ ವೇತನ ವಿತರಿಸಿ ಆಶೀರ್ವಚನ ನೀಡಿದರು. ಉಡುಪಿ ಸೌತ್ ಕೆನರಾ ಕಾಸರ ಗೋಡು ದ್ರಾವಿಡ ಬ್ರಾಹ್ಮಣ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಪ್ರೊ.ಶ್ರೀಶ ಆಚಾರ್ಯ, ಯು.ಕೆ.ರಾಘವೇಂದ್ರ ರಾವ್, ಬೈಕಾಡಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ಸೊಸೈಟಿ ಸದಸ್ಯ ಸದಾಶಿವ್ ರಾವ್ ಅತಿಥಿಗಳ ಪರಿಚಯ ಮಾಡಿದರು. ಜತೆ ಕಾರ್ಯದರ್ಶಿ ಗುರುರಾಜ್ ಭಟ್ಟ ಲಾನುಭವಿಗಳ ಪಟ್ಟಿ ವಾಚಿಸಿದರು. ಪ್ರೊ.ರಾಧಾಕೃಷ್ಣ ಆಚಾರ್ಯ ವಂದಿಸಿದರು. ಕಾರ್ಯದರ್ಶಿ ರಾಮಚಂದ್ರ ಉಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.
‘ಕುಲಪತಿ ಆಗಲು ಅರ್ಹತೆಗಿಂತ ದೇವರ ಅನುಗ್ರಹ ಇತ್ತು’
ಅರ್ಹತೆಯಿಂದ ನಾನು ಮಂಗಳೂರು ವಿವಿಯ ಕುಲಪತಿ ಆಗಿದ್ದೇನೆ ಎಂದು ಹೇಳುವುದಿಲ್ಲ. ರಾಜಕೀಯ ನಾಯಕರ ಪ್ರಭಾವ ಪಡೆದಿದ್ದೇನೆ ಅಥವಾ ಪಡೆದಿಲ್ಲ ಎಂಬುದರ ಬಗ್ಗೆಯೂ ಹೇಳುವುದಿಲ್ಲ. ಆದರೆ ದೇವರ ಅನುಗ್ರಹ, ಸ್ವಾಮೀಜಿಗಳ ಆಶೀರ್ವಾದ, ವಿದ್ಯಾರ್ಥಿ ಹಾಗೂ ಸಹದ್ಯೋಗಿಗಳ ಹಾರೈಕೆ, ತಂದೆ-ತಾಯಿಯ ಪ್ರಾರ್ಥನೆ ನನ್ನ ಮೇಲೆ ಇತ್ತು. ಕಳೆದು ಒಂದೂವರೆ ವರ್ಷದಿಂದ ಕುಲಪತಿ ಹುದ್ದೆಗಾಗಿ ನಾನು ಹೋರಾಟ ಮಾಡುವಾಗ ಬ್ರಾಹ್ಮಣ ರಲ್ಲಿ ಒಗ್ಗಟ್ಟಿನ ಕೊರತೆ ಕಂಡುಕೊಂಡೆ ಎಂದು ಕುಲಪತಿ ಪಿ.ಎಸ್. ಎಡಪಡಿತ್ತಾಯ ತಿಳಿಸಿದರು.
ಶೋಭಾ ಮುಖ ನೋಡಿ ಮತ ಸಿಗಲಿ
ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 25 ಮಂದಿ ಬಿಜೆಪಿ ಸಂಸದರು ಗೆದ್ದಿರುವುದು ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಅಲ್ಲ. ಜನರು ಅವರಿಗೆ ಮೋದಿಯ ಮುಖ ನೋಡಿ ಮತ ಹಾಕಿದ್ದಾರೆ. ಹಾಗಾಗಿ ಇನ್ನು ಮುಂದೆ ಶೋಭಾ ಅವರ ಮುಖನೋಡಿ ಜನರು ಮತ ಹಾಕುವಂತಾಗಬೇಕು. ಆಗ ಮಾತ್ರ ಕರ್ನಾಟಕಕ್ಕೆ ಶೋಭೆ ಬರುತ್ತದೆ. ಇಲ್ಲದಿದ್ದರೆ ಬೇತಾಳದಂತೆ ಒದ್ದಾಡಿದ್ದು ವ್ಯರ್ಥವಾಗುತ್ತದೆ ಎಂದು ಅದಮಾರು ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ವ್ಯಂಗ್ಯವಾಡಿದರು.