ವಗ್ಗ : ವಸತಿ ಶಾಲೆಯ ಅನ್ನಪೂರ್ಣ, ಶ್ರಾವ್ಯ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕಬಡ್ಡಿಯಲ್ಲಿ ಮಿಂಚುತ್ತಿರುವ ಗ್ರಾಮೀಣ ಯುವ ಪ್ರತಿಭೆಗಳು
ಬಂಟ್ವಾಳ, ನ. 2: ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಕಬಡ್ಡಿ ಪಂದ್ಯಾಟದಲ್ಲಿ ಸತತ ಮೂರು ವರ್ಷಗಳಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವ ಮೂಲಕ ವಿಶೇಷ ಸಾಧನೆ ಮಾಡಿದೆ.
ಕಬ್ಬಡ್ಡಿ ಪಂದ್ಯದಲ್ಲಿ ಪ್ರತೀ ವರ್ಷ ರಾಷ್ಟ್ರಮಟ್ಟಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಸುತ್ತಾ ಬಂದಿರುವ ಜಿಲ್ಲೆಯ ಏಕೈಕ ವಸತಿ ಶಾಲೆ ಇದಾಗಿದ್ದು, ಇದುವರೆಗೆ ಶಾಲೆಯ 11 ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದರಲ್ಲಿ 7 ಮಂದಿಯ ವಿದ್ಯಾರ್ಥಿನಿಯರಿದ್ದಾರೆ. 2016-17ರಲ್ಲಿ ಮೂರು ವಿದ್ಯಾರ್ಥಿಗಳು, 17-18 ಮೂರು ವಿದ್ಯಾರ್ಥಿಗಳು, 2018-19ರಲ್ಲಿ ಮೂರು ವಿದ್ಯಾರ್ಥಿಗಳು ಮತ್ತು 19-20 ಇಬ್ಬರು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹೀಗೆ ಈ ವಿದ್ಯಾ ಸಂಸ್ಥೆಯ ಮಕ್ಕಳು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬತೆ ಕಬಡ್ಡಿ ಕ್ಷೇತ್ರಕ್ಕೆ ಪಾದಾರ್ಪಣೆಗೈದ ಪ್ರಾಥಮಿಕ ಹಂತದಲ್ಲೆ ವಲಯ ಮಟ್ಟದಿಂದ ಹಿಡಿದು ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೆ ಏರಿ ವೈಯಕ್ತಿಕ ಚಾಂಪಿಯನ್ ಮುಡಿಗೇರಿಸಿಕೊಂಡಿದ್ದಾರೆ. ಶಾಲೆಯ ಸ್ವಾಗತ ಕೊಠಡಿಯ ಶೋಕೇಸ್ ತುಂಬಾ ಪ್ರಶಸ್ತಿಪತ್ರಗಳು, ಹಲವಾರು ಟ್ರೋಫಿಗಳು ಕಣ್ಣಿಗೆ ಗೋಚರಿಸುತ್ತದೆ.
ವಸತಿ ಶಾಲೆಯ ಸಾಧನೆ
2019-20ನೇ ಶೈಕ್ಷಣಿಕ ವರ್ಷದ ಕಬಡ್ಡಿ ಪಂದ್ಯಾಟದಲ್ಲಿ ವಲಯ ಮಟ್ಟದಲ್ಲಿ 14ರ ವಯೋಮಾನದ ಬಾಲಕ/ಬಾಲಕಿಯರ ಹಾಗೂ 17ರ ವಯೋಮಾನದ ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ. ತಾಲೂಕು ಮಟ್ಟದಲ್ಲಿ ಈ ಮೂರು ತಂಡಗಳು ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಜಿಲ್ಲಾ ಮಟ್ಟದಲ್ಲಿ 17ರ ವಯೋಮಾನದ ಬಾಲಕಿಯರು ದ್ವಿತೀಯ ಸ್ಥಾನ ಪಡೆದು 5 ಜನ ಬಾಲಕಿಯರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 14ರ ವಯೋಮಾನದ ಬಾಲಕಿಯರು ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟದಲ್ಲಿ ಆಯ್ಕೆಯಾಗಿದ್ದಾರೆ. ವಿಭಾಗ ಮಟ್ಟದಲ್ಲಿ 14ರ ವಯೋಮಾನದ ಬಾಲಕಿಯರಿಗೆ ದ್ವಿತೀಯ ಸ್ಥಾನ ಪಡೆದು ತಂಡದ ಐದು ವಿದ್ಯಾರ್ಥಿನಿಯರು ರಾಜ್ಯ ಮಟ್ಟದಲ್ಲಿ ಆಯ್ಕೆ, ರಾಜ್ಯ ಮಟ್ಟದಲ್ಲಿ 5 ವಿದ್ಯಾರ್ಥಿನಿಯರು ಮೈಸೂರು ವಿಭಾಗದ ಉಡುಪಿ ತಂಡವು ಪ್ರಥಮ ಸ್ಥಾನವನ್ನು ಪಡೆದು, ಇವರಲ್ಲಿ ಅನ್ನಪೂರ್ಣ, ಶ್ರಾವ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.
ರಾಷ್ಟ್ರಮಟ್ಟಕ್ಕೆ ಆಯ್ಕೆ
ವಿದ್ಯಾರ್ಥಿನಿ ಅನ್ನಪೂರ್ಣ ದೈತಪ್ಪ ನಾಗರಾಳ ಇವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ನಾಗರಾಳ ಊರಿನ ದೈತಪ್ಪ ನಾಗರಾಳ ಹಾಗೂ ವಿಜಯಲಕ್ಷ್ಮಿ ಯವರ ಮೂರನೇ ಪುತ್ರಿ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾವಳಪಡೂರು ವಗ್ಗ ಇಲ್ಲಿನ 8ನೇ ತರಗತಿ ವಿದ್ಯಾರ್ಥಿನಿ.
ಶ್ರಾವ್ಯ ಅವರು, ದ.ಕ. ಜಿಲ್ಲೆಯ ಬೆಳ್ತಂಗಡಿ ಮಚ್ಚಿನ ಗ್ರಾಮದ ಬಳ್ಳಮಂಜ ಊರಿನ ವಾಸು ಕುಲಾಲ್ ಹಾಗೂ ಸುಜಾತ ಕುಲಾಲ್ ದಂಪತಿಗಳ ಎರಡನೇ ಪುತ್ರಿ ಮೊರಾರ್ಜಿ ವಸತಿ ಶಾಲೆ ಕಾವಳಪಡೂರು ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ. ಇವರು 2018-19ರ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಕಬಡ್ಡಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ ತಂಡದ ನಾಯಕಿಯಾಗಿ ತಂಡವನ್ನು ಮುನ್ನಡೆಸಿದ್ದರು.
ತರಬೇತಿದಾರ ದೈಹಿಕ ಶಿಕ್ಷಕ ಆಸಿದ್ ಪಡಂಗಡಿರವರ ನಿರಂತರ ಹಾಗೂ ವಿನೂತನ ತರಬೇತಿ ಹಾಗೂ ಪ್ರಯತ್ನದಿಂದ ಈ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂಬುದು ಕ್ರೀಡಾಭಿಮಾನಿಗಳ ಮನದಾಳದ ಮಾತು.
ವಗ್ಗದ ಆಲಂಪುರಿ ಮಣ್ಣಿನಲ್ಲಿಯೇ ಕಬಡ್ಡಿಯ ಸತ್ವ ಅಡಗಿದೆ. ದೈಹಿಕ ಶಿಕ್ಷಕ ಆಸಿದ್ ಪಡಂಗಡಿಯವರ ವಿನೂತನ ತರಬೇತಿ ವಿದ್ಯಾರ್ಥಿಗಳ ಸಾಧನೆಯ ಹಿಂದಿನ ಶ್ರೀ ರಕ್ಷೆಯಾಗಿದೆ. ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ವಿದ್ಯಾರ್ಥಿಗಳಿರುವ ಶಾಲೆ ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.
- ಸಂತೋಷ್ ಎಸ್. ಸನಿಲ್, ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಗ್ಗ