ಶ್ರೀ ಸೋಮನಾಥ ಚಾವಡಿ ಸಭಾಭವನ ಉದ್ಘಾಟನೆ
ಉಳ್ಳಾಲ, ನ.11: ರಾಜ್ಯದ ಎಲ್ಲಾ ದೇವಸ್ಥಾನಗಳು ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಆ ಪೈಕಿ ಸೋಮನಾಥ ದೇವಸ್ಥಾನವು ಕಡಲ ತಟದ ರಮಣೀಯ ತಾಣದಲ್ಲಿದ್ದು, ಶಾಸಕರು, ಸಚಿವರುಗಳು ಒಟ್ಟಾಗಿ ಕೆಲಸ ಮಾಡಿದರೆ ಸೋಮೇಶ್ವರ ದೇವಸ್ಥಾನ ಪ್ರವಾಸೋದ್ಯಮ ತಾಣವಾಗಿ ಮಾರ್ಪಾಡಾಗುವುದರಲ್ಲಿ ಸಂಶಯವಿಲ್ಲ ಎಂದು ದ.ಕ.ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಮುಜರಾಯಿ ಸಚಿವ ಕೋಟ ಶ್ರಿನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಸೋಮೇಶ್ವರ ಶ್ರಿ ಸೋಮನಾಥ ದೇವಸ್ಥಾನದ ಉಪಯೋಗಕ್ಕಾಗಿ ನೂತನವಾಗಿ ನಿರ್ಮಿಸಲಾದ ಶ್ರಿ ಸೋಮನಾಥ ಚಾವಡಿ ಸಭಾಭವನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 34,500 ದೇವಸ್ಥಾನಗಳಿದ್ದು,196 ದೇವಾಲಯಗಳು ’ಎ’ ಗ್ರೇಡ್, 225 ದೇವಸ್ಥಾನಗಳು ಐದು ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದೆ. ಇತರ ದೇವಸ್ಥಾನಗಳ ಆದಾಯ ಹೆಚ್ಚಿಸಲು ಪ್ರಯತ್ನ ನಡೆಸಲಾಗಿದೆ. 33,000 ದೇವಸ್ಥಾನಗಳಿಗೆ ಎಣ್ಣೆ ಮತ್ತು ಬತ್ತಿಗೆ ವಾರ್ಷಿಕ 45 ಸಾವಿರ ರೂ. ಅನುದಾನ ನೀಡಲಾಗುತ್ತಿದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಅಲ್ಲದೆ ದೇವಸ್ಥಾನಗಳಿಗೆ ಸಾವಿರ ಸಿಬ್ಬಂದಿಯನ್ನು ನೇಮಕಗೊಳಿಸಿ ಪಾರದರ್ಶಕ ಆಡಳಿತ ನಡೆಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಆದಾಯ ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು ಎಂದು ಶ್ರೀನಿವಾಸ ಪೂಜಾರಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯು.ಟಿ.ಖಾದರ್ ಮಾತನಾಡಿ, ಈ ಕ್ಷೇತ್ರದ ಅಭಿವೃದ್ಧಿಗೆ ತಾನು ಸಾಕಷ್ಟು ಶ್ರಮಿಸಿದ್ದೇನೆ. ಕೆರೆಯ ಪುನಶ್ಚೇತಮ ದ್ವಿಪಥ ರಸ್ತೆ ನಿರ್ಮಾಣ ಇತ್ಯಾದಿಯ ಜೊತೆಗೆ ದೇವಸ್ಥಾನ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಡಾಮಾರು ಮತ್ತು ಕಾಂಕ್ರಿಟ್ಗೊಳಿಸಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರದ ತಂತ್ರಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಕ್ಷೇತ್ರದ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಸೋಮೇಶ್ವರ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನ್ಯಾಯವಾದಿ ರವೀಂದ್ರನಾಥ ರೈ, ಉದ್ಯಮಿ ಜನಾರ್ದನ ಹೊಳ್ಳ, ನಿವೃತ್ತ ಸೈನಿಕ ಪಿ.ಕೃಷ್ಣ ಗಟ್ಟಿ ಸೋಮೇಶ್ವರ ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ರಾಘವ ಆರ್ ಉಚ್ಚಿಲ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸುಧಾಕರ ಭಂಡಾರಿ, ರಮೇಶ್ ಕೊಲ್ಯ, ರುಕ್ಮಯ ಬಂಗೇರ, ಯು.ಸೋಮಯ್ಯ, ಪ್ರತಿಭಾ ಯು.ಎಸ್., ಲಕ್ಷ್ಮಿಪೂಜಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಸ್ವಾಗತಿಸಿದರು. ರಮಾನಾಥ ಬಂಗೇರ ಕಾರ್ಯಕ್ರಮ ನಿರೂಪಿಸಿದರು.