ಸರಕಾರದಿಂದ ಜನ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ: ವಿನಯ ಕುಮಾರ್ ಸೊರಕೆ
ಉಡುಪಿ, ಡಿ.22: ಕೇಂದ್ರ ಸರಕಾರ ತರಾತುರಿಯಿಂದ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ತೀವ್ರತರದ ಪ್ರತಿಭಟನೆಗಳು ನಡೆಯುತ್ತಿವೆ. ಸರಕಾರ ಜನರ ಪ್ರತಿಭಟನೆಯನ್ನು, ಅವರ ಧ್ವನಿಯನ್ನು ಪೊಲೀಸರ ಮೂಲಕ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತಿದ್ದ ಅವರು, ಇದು ಸಂವಿಧಾನದ ಮೇಲೆ ನಡೆಯುತ್ತಿರುವ ಗಧಾಪ್ರಹಾರವಾಗಿದೆ. ಬಿಜೆಪಿ ಆಳ್ವಿಕೆಯ ರಾಜ್ಯದಲ್ಲಿ ಸೆಕ್ಷನ್ 114ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಸಾರ್ವಜನಿಕ ಸಭೆ ಹಾಗೂ ಮೆರವಣಿಗೆಗೆ ಅವಕಾಶವನ್ನು ನಿರಾಕರಿಸಲಾಗುತ್ತಿದೆ. ಇದು ವ್ಯಕ್ತಿ ಸ್ವಾತಂತ್ರದ ಕತ್ತು ಹಿಸುಕಿದಂತೆ ಎಂದವರು ದೂರಿದರು.
ಪ್ರಸ್ತಾವಿತ ಮಸೂದೆಯಲ್ಲಿ ಪೌರತ್ವಕ್ಕೆ ಮಾನದಂಡವಾಗಿ ಧರ್ಮವನ್ನು ಬಳಸಿ ರುವುದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ.ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪಾಕಿಸ್ತಾನ, ಬಾಂಗ್ಲಾ ಮತ್ತು ಅಪಘಾನಿಸ್ತಾನದಿಂದ ಬಂದ ಎಲ್ಲಾ ಹಿಂದೂ, ಕ್ರಿಶ್ಚಿಯನ್, ಬೌದ್ಧ, ಪಾರ್ಸಿ, ಜೈನ ಅಕ್ರಮ ವಲಸಿಗರಿಗೆ ಪೌರತ್ವ ನೀಡಲು ರೂಪಿಸಲಾದ ಈ ಕಾಯ್ದೆ ಸಿಎಎ ಅಡಿ ಪೌರತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ದೇಶಗಳಿಂದ ಬಂದ ಮುಸ್ಲಿಂ ವಲಸಿಗರಿಗೆ ಪೌರತ್ವ ಪಡೆಯುವ ಅರ್ಹತೆಯನ್ನು ಉದ್ದೇಶ ಪೂರ್ವಕವಾಗಿ ತಡೆಹಿಡಿಯಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಧರ್ಮದ ಆಧಾರದಲ್ಲಿ ರೂಪಿತವಾದ ಈ ಮಸೂದೆ ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ. ನಮ್ಮ ದೇಶದಲ್ಲಿ ಎಲ್ಲಾ ಧರ್ಮದವರು ಜೀವಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದನ್ನು ಬಿಜೆಪಿ ಸರಕಾರ ಕಸಿಯಲು ಪ್ರಯತ್ನಿಸುತ್ತಿದೆ ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನ್ನ ಅಪಕ್ವ, ಅಸಮರ್ಪಕ ಆರ್ಥಿಕ ನೀತಿ, ಬೆಲೆ ಏರಿಕೆ, ಮಹಿಳೆಯರ ಮೇಲಿನ ದೌರ್ಜನ್ಯ, ನಿರುದ್ಯೋಗ ಸಮಸ್ಯೆ, ಫ್ಯಾಸ್ಟ್ಟ್ಯಾಗ್ ಸಮಸ್ಯೆಗಳಿಂದ ಜರ್ಜರಿತವಾಗಿದ್ದು, ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ಇಂಥ ಭಾವನಾತ್ಮಕ ವಿಷಯಗಳೊಂದಿಗೆ ಚಲ್ಲಾಟವಾಡುತ್ತಿದೆ. ಸಿಎಎ ವಿರುದ್ಧ ದೇಶದ ಜನರು ಎತ್ತುತ್ತಿರುವ ಧ್ವನಿಯನ್ನು ಹತ್ತಿಕ್ಕಲು ಕೇಂದ್ರ ಸರಕಾರ ಬಲ ಪ್ರಯೋಗದ ಮೂಲಕ ಪ್ರಯತ್ನಿಸುತ್ತಿದೆ ಎಂದವರು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರಾದ ಭಾಸ್ಕರ ರಾವ್ ಕಿದಿಯೂರು, ನರಸಿಂಹ ಮೂರ್ತಿ, ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಹಾಬಲ ಕುಂದರ್, ಪ್ರಖ್ಯಾತ್ ಶೆಟ್ಟಿ, ಕೀರ್ತಿಶೆಟ್ಟಿ, ಅಣ್ಣಯ್ಯ ಶೇರಿಗಾರ್ ಮುಂತಾದವರು ಉಪಸ್ಥಿತರಿದ್ದರು.