ಮಾತುಕತೆಗಳಿಂದ ಚೀನಾ ಬದಲಾಗುವುದಿಲ್ಲ: ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯನ್

ವಾಶಿಂಗ್ಟನ್, ಅ. 10: ಚೀನಾವು ತನ್ನ ಅತಿಕ್ರಮಣ ಯೋಜನೆಯ ಭಾಗವಾಗಿ, ಭಾರತದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯ ನಿಯಂತ್ರಣವನ್ನು ಬಲವಂತವಾಗಿ ಪಡೆಯಲು ಪ್ರಯತ್ನಗಳನ್ನು ನಡೆಸಿತ್ತು ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯನ್ ಹೇಳಿದ್ದಾರೆ.
ಅದೇ ವೇಳೆ, ಮಾತುಕತೆ ಮತ್ತು ಒಪ್ಪಂದಗಳು ಚೀನಾವನ್ನು ಪರಿವರ್ತಿಸುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಚೀನಾಗಳು ಪೂರ್ವ ಲಡಾಖ್ನ ಗಡಿಯಲ್ಲಿ ಹಲವು ತಿಂಗಳಿನಿಂದ ಮುಖಾಮುಖಿಯಾಗಿ ನಿಂತಿವೆ. ಇದರಿಂದಾಗಿ ಈ ಎರಡು ದೇಶಗಳ ಸಂಬಂಧ ಭಾರೀ ಪ್ರಮಾಣದಲ್ಲಿ ಹಳಸಿದೆ. ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಉಭಯ ದೇಶಗಳು ಈಗಾಗಲೇ ಹಲವು ಸುತ್ತುಗಳ ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ಮಾತುಕತೆಗಳಲ್ಲಿ ಭಾಗವಹಿಸಿವೆ. ಆದರೆ, ಬಿಕ್ಕಟ್ಟನ್ನು ಬಗೆಹರಿಸುವ ಯಾವುದೇ ಪ್ರಗತಿಯನ್ನು ಸಾಧಿಸುವಲ್ಲಿ ಈ ಮಾತುಕತೆಗಳು ವಿಫಲವಾಗಿವೆ.
‘‘ಮಾತುಕತೆಗಳು ಮತ್ತು ಒಪ್ಪಂದಗಳು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಬದಲಾಯಿಸುವುದಿಲ್ಲ ಎನ್ನುವುದನ್ನು ಸ್ವೀಕರಿಸುವ ಕಾಲ ಸನ್ನಿಹಿತವಾಗಿದೆ. ಈ ವಾಸ್ತವವನ್ನು ಒಪ್ಪಿಕೊಳ್ಳದೆ ಮುಂದುವರಿದರೆ ಸಿಗುವ ಲಾಭ ಏನೂ ಇಲ್ಲ. ಈ ನಟನೆಯನ್ನು ನಾವು ತುಂಬಾ ಸಮಯದಿಂದ ಮಾಡುತ್ತಾ ಬಂದಿದ್ದೇವೆ’’ ಎಂದು ಒಬ್ರಿಯನ್ ಹೇಳಿದರು.