ಬೆಂಗರೆಯಲ್ಲಿ ಡಿವೈಎಫ್ಐ ಪ್ರತಿಭಟನೆ
ಮಂಗಳೂರು, ನ.7: ಬೆಂಗರೆ ಗ್ರಾಮದ ಜನರನ್ನು ಮೂಲಭೂತ ಸೌಕರ್ಯಗಳಿಂದ ವಂಚಿಸಿ ಕೇವಲ ಪ್ರವಾಸೋದ್ಯಮದ ಹೆಸರಲ್ಲಿ ಸ್ಥಳೀಯ ಜನರನ್ನು ಸಮುದ್ರದಿಂದ ಬೇರ್ಪಡಿಸುವ, ಶ್ರೀಮಂತರ ಮೋಜಿನಾಟಕೆ ಬೆಲೆಬಾಳುವ ಭೂಮಿಯನ್ನು ಖಾಸಗಿ ಕಂಪೆನಿಗಳಿಗೆ ಧಾರೆಯೆರೆಯುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಡಿವೈಎಫ್ಐ ಬೆಂಗರೆ ಗ್ರಾಮ ಸಮಿತಿಯಿಂದ ಬೆಂಗರೆ ಕಡಲ ಕಿನಾರೆಯಲ್ಲಿ ಶುಕ್ರವಾರ ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಬೆಂಗರೆ ಪ್ರದೇಶವನ್ನು ಅಭಿವೃದ್ಧಿಪಡಿಸುವೆ ಎಂದು ಕೇವಲ ಬೀಚ್ಗಳನ್ನಷ್ಟೇ ಅಭಿವೃದ್ಧಿಪಡಿಸಿದರೆ ಅದು ನಿಜವಾದ ಅಭಿವೃದ್ಧಿ ಅಲ್ಲ, ಇಲ್ಲಿ ನೂರಾರು ವರ್ಷಗಳಿಂದ ನೆಲೆ ನಿಂತಿರುವ ನಿವಾಸಿಗಳ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಈಡೇರಿಸುವುದೇ ನಿಜವಾದ ಅಭಿವೃದ್ಧಿ. ಕಳೆದ ಹಲವಾರು ವರ್ಷಗಳಿಂದ ಈ ಬೆಂಗರೆಯ ನಿವಾಸಿಗಳ ಬಹುಮುಖ್ಯ ಬೇಡಿಕೆ ಮಹಾನಗರ ಪಾಲಿಕೆ ಈವರೆಗೂ ಈಡೇರಿಸಲಿಲ್ಲ. ಕುಡಿಯುವ ನೀರಿನ ಸಂಪರ್ಕ ಕೊಟ್ಟಿಲ್ಲ, ಹಕ್ಕುಪತ್ರವಿಲ್ಲ, ಡ್ರೈನೇಜ್ ಇಲ್ಲ, ಚರಂಡಿ ಇಲ್ಲ, ಆಟದ ಮೈದಾನ ಇಂತಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಅಭಿವೃದ್ಧಿ ಹೆಸರಲ್ಲಿ ಇಲ್ಲಿನ ಫಲವತ್ತಾದ ಭೂಮಿಯನ್ನು ಖಾಸಗಿ ಧಣಿಗಳಿಗೆ ಮಾರಲು ಹೊರಟ ಯೋಜನೆಯನ್ನು ಪ್ರಾರಂಭಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಶಾಸಕರು, ಜನಪ್ರತಿನಿಧಿಗಳು ಈ ಊರಿಗೆ ಚುನಾವಣೆ ಸಂದರ್ಭ ಕೊಟ್ಟ ಆಶ್ವಾಸನೆಗಳೆಲ್ಲವು ಏನಾದವು. ಈ ಹಿಂದೆಯೂ ಗಾಲ್ಫ್ ಕ್ಲಬ್ ನಿರ್ಮಾಣದ ವಿರುದ್ಧ ರಾಜಿರಹಿತ ಹೋರಾಟಗಳನ್ನು ಮಾಡಿದ್ದೇವೆ ಇಂತಹದೇ ಯೋಜನೆ ಮತ್ತೊಮ್ಮೆ ಕೈಗೊಂಡರೆ ಅದರ ವಿರುದ್ಧವು ತೀವ್ರ ಹೋರಾಟ ಮಾಡಲಾಗುವುದು ಎಂದರು.
ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಯ ಮುಖಂಡರಾದ ವಿಲ್ಲಿ ವಿಲ್ಸನ್, ಮೋನಾಕ, ಡಿವೈಎಫ್ಐ ಜಿಲ್ಲಾ ಮುಖಂಡರಾದ ಎ.ಬಿ.ನೌಶದ್ ಡಿವೈಎಫ್ಐ ಬೆಂಗರೆ ಗ್ರಾಮ ಸಮಿತಿ ಅಧ್ಯಕ್ಷ ಹನೀಫ್ ಬೆಂಗರೆ, ಕಾರ್ಯದರ್ಶಿ ರಿಝ್ವಾನ್, ಅಸ್ಲಂ, ನಾಸಿರ್, ತೌಸೀಫ್, ತಸ್ರೀಫ್, ಸಮದ್, ಬಿಲಾಲ್, ಜಮಾಅತ್ ಕಮಿಟಿ ಸದಸ್ಯ ಆಶ್ರಫ್, ಬಶೀರ್ ಮುಂತಾದವರು ಉಪಸ್ಥಿತರಿದ್ದರು.