ಕೆಎಸ್ಸಾರ್ಟಿಸಿ ನೌಕರರ ಮುಷ್ಕರ 2ನೇ ದಿನಕ್ಕೆ: ದ.ಕ. ಜಿಲ್ಲೆಯಲ್ಲಿ ಬಸ್ ಸಂಖ್ಯೆಯಲ್ಲಿ ಇಳಿಮುಖ
ಪ್ರಯಾಣಿಕರ ಪರದಾಟ
ಮಂಗಳೂರು, ಡಿ.12: ಕೆಎಸ್ಸಾರ್ಟಿಸಿ ಸಿಬ್ಬಂದಿಯನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಗೆ ರಾಜ್ಯ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರವು 2ನೇ ದಿನವಾದ ಶನಿವಾರವೂ ಮುಂದುವರಿದಿದೆ. ಇದರಿಂದ ಮುಷ್ಕರದ ಬಿಸಿ ದ.ಕ. ಜಿಲ್ಲೆಗೂ ತಟ್ಟಿದಂತಾಗಿದೆ.
ಕರಾವಳಿ ಭಾಗದಲ್ಲಿ ಯಾವುದೇ ಮುಷ್ಕರ ಇಲ್ಲದಿದ್ದರೂ ಬೆಂಗಳೂರಿನಿಂದ ಯಾವುದೇ ಸರಕಾರಿ ಬಸ್ಗಳು ಇಲ್ಲಿಗೆ ಸಂಚರಿಸುತ್ತಿಲ್ಲ. ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಉಂಟಾಗಿತ್ತು. ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿಯೂ ಶನಿವಾರ ಬೆಳಗ್ಗಿನಿಂದ ಬಸ್ಗಳ ಸಂಖ್ಯೆ ಇಳಿಮುಖವಾಗಿದೆ. ಇದರಿಂದ ಸಾಮಾನ್ಯ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.
ಮಂಗಳೂರು ನಗರದಲ್ಲಿ ಬಸ್ಗಳು ಸಂಚಾರ ನಡೆಸಿದರೂ, ಹೊರ ಜಿಲ್ಲೆಗಳಿಗೆ ತೆರಳಿದ ಬಸ್ಗಳು ಅರ್ಧದಲ್ಲೇ ಸಂಚಾರ ನಿಲ್ಲಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಅದೇ ರೀತಿ ಹೊರ ಜಿಲ್ಲೆಗಳಿಗೆ ಈಗಾಗಲೇ ತೆರಳಿರುವ ಬಸ್ಗಳಲ್ಲಿ ಅನೇಕ ಬಸ್ಗಳು ವಾಪಸ್ ಬಂದಿಲ್ಲ. ಪುತ್ತೂರು ವಿಭಾಗದಲ್ಲಿ 2ನೇ ದಿನವೂ ಬಸ್ಗಳು ಸಂಚಾರ ನಡೆಸದೆ ವ್ಯತ್ಯಯವಾಗಿದೆ.
ಮಂಗಳೂರಿನ ಬಸ್ ನಿಲ್ದಾಣದಲ್ಲಿ ಬಸ್ಗಳ ಸಂಖ್ಯೆ ಶನಿವಾರ ಬೆಳಗ್ಗಿನಿಂದಲೇ ತೀರಾ ಇಳಿಮುಖವಾಗಿದೆ. ಸ್ಥಳೀಯ ರೂಟ್ನ ಬಸ್ಗಳು ಕೆಲವು ಮಾತ್ರ ಬಸ್ ನಿಲ್ದಾಣದಲ್ಲಿವೆ. ದೂರದ ಊರಿಗೆ ತೆರಳುವ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಲ್ಲಿ 380 ಬಸ್ಗಳಿದ್ದು, ಅದರಲ್ಲಿ ಬೆಂಗಳೂರಿಗೆ 8 ಬಸ್ಗಳು ಶನಿವಾರ ತೆರಳಿದ್ದವು. ಅವುಗಳನ್ನು ಸಕಲೇಶಪುರದಲ್ಲೇ ತಡೆಹಿಡಿಯಲಾಗಿದ್ದರೆ, ಮೈಸೂರಿಗೆ ತೆರಳಿದ ಬಸ್ಗಳನ್ನು ಮಡಿಕೇರಿಯಲ್ಲಿ ತಡೆಹಿಡಿಯಲಾಗಿದೆ. ಹೀಗಾಗಿ ಹುಬ್ಬಳ್ಳಿ, ಕಾರವಾರಕ್ಕೆ ತೆರಳುವ ಬಸ್ಗಳು ಪ್ರಯಾಣ ಬೆಳೆಸಿಲ್ಲ. ಧರ್ಮಸ್ಥಳಕ್ಕೆ 23 ಬಸ್ಗಳನ್ನು ಬಿಡಲಾಗಿದೆ.
ಜಿಲ್ಲೆಯೊಳಗೆ ಮಂಗಳೂರು ವಿಭಾಗದಿಂದ ಸಂಚಾರ ಎಂದಿನಂತಿತ್ತು. ಆದರೂ, ಗ್ರಾಮೀಣ ಪ್ರದೇಶಗಳಲ್ಲಿ ಬೆರಳೆಣಿಕೆ ಪ್ರಯಾಣಿಕರಿದ್ದರೂ ಬಸ್ಗಳು ಸಂಚಾರ ನಡೆಸಿವೆ. ಮುಷ್ಕರದ ವಿಚಾರ ಗೊತ್ತಿದ್ದರಿಂದ ಸರಕಾರಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆಯಿತ್ತು. ದೂರದ ಪ್ರಯಾಣಕ್ಕೆ ಸರಕಾರಿ ಬಸ್ಗಳನ್ನು ಬಳಸುತ್ತಿದ್ದ ಪ್ರಯಾಣಿಕರು ಶನಿವಾರ ಖಾಸಗಿ ಬಸ್ಗಳಿಗೆ ಮೊರೆ ಹೋದರು.