ಗಾಂಧಿ ಪ್ರತಿಮೆಯ ವಿರೂಪ ಖಂಡಿಸಿದ ಅಮೆರಿಕ

ವಾಶಿಂಗ್ಟನ್, ಡಿ. 16: ಕಳೆದ ವಾರ ವಾಶಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಎದುರುಗಡೆ ಇರುವ ಮಹಾತ್ಮಾ ಗಾಂಧಿಯ ಪ್ರತಿಮೆಯನ್ನು ವಿರೂಪಗೊಳಿಸಿರುವ ಕೃತ್ಯವನ್ನು ಅವೆುರಿಕ ಪ್ರಬಲವಾಗಿ ಖಂಡಿಸಿದೆ. ಈ ಕೃತ್ಯವನ್ನು ‘ಭಯಾನಕ’ ಎಂಬುದಾಗಿ ಬಣ್ಣಿಸಿರುವ ಅಮೆರಿಕ, ‘‘ಮಹಾತ್ಮಾ ಗಾಂಧಿ ಅಮೆರಿಕನ್ನರು ಪ್ರತಿನಿಧಿಸುವ ಮೌಲ್ಯಗಳಿಗಾಗಿ ಹೋರಾಡಿದ್ದಾರೆ’’ ಎಂದು ಹೇಳಿದೆ.
ಇದು ಅಮೆರಿಕದಲ್ಲಿ ಆರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ನಡೆದ ಎರಡನೇ ಘಟನೆಯಾಗಿದೆ.
‘‘ಇದು ಭಯಾನಕ. ಯಾವುದೇ ಪ್ರತಿಮೆ ಅಥವಾ ಸ್ಮಾರಕವನ್ನು ಅಪವಿತ್ರಗೊಳಿಸಬಾರದು. ಅದರಲ್ಲೂ, ಶಾಂತಿ, ನ್ಯಾಯ ಮತ್ತು ಸ್ವಾತಂತ್ರ್ಯ ಮುಂತಾದ ಅಮೆರಿಕ ಪ್ರತಿನಿಧಿಸುವ ಮೌಲ್ಯಗಳಿಗಾಗಿ ಹೋರಾಡಿದ ಮಹಾತ್ಮಾ ಗಾಂಧಿಯಂಥವರ ಪ್ರತಿಮೆಗಳನ್ನು ಯಾವ ಕಾರಣಕ್ಕಾಗಿಯೂ ಅಪವಿತ್ರಗೊಳಿಸಬಾರದು’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಲೀ ಮೆಕೆನಾನಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಡಿಸೆಂಬರ್ 12ರಂದು ಮಹಾತ್ಮಾ ಗಾಂಧಿ ಸ್ಮಾರಕ ಪ್ಲಾಝಾದಲ್ಲಿರುವ ಪ್ರತಿಮೆಯನ್ನು ‘‘ಖಾಲಿಸ್ತಾನಿ ಶಕ್ತಿಗಳು’’ ವಿರೂಪಗೊಳಿಸಿವೆ ಎಂದು ಭಾರತೀಯ ರಾಯಭಾರ ಕಚೇರಿ ಕಳೆದ ವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.