ಹೊಸ ವರ್ಷ, ಹೊಸ ಅವಕಾಶ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಅಮೆರಿಕ ಸ್ವಾಗತ

ವಾಷಿಂಗ್ಟನ್, ಜ.5: ಶಾಂತಿಯುತ ಮತ್ತು ಸುರಕ್ಷಿತ ಇಂಡೋ-ಫೆಸಿಫಿಕ್ ಪ್ರದೇಶ ಸ್ಥಾಪನೆಯ ಸಮಾನ ಹಿತಾಸಕ್ತಿಯ ನಿಟ್ಟಿನಲ್ಲಿ ಜತೆಯಾಗಿ ಉಭಯ ದೇಶಗಳು ಕಾರ್ಯ ನಿರ್ವಹಿಸುವುದನ್ನು ಅಮೆರಿಕ ಎದುರು ನೋಡುತ್ತಿದೆ ಎಂದು ಭಾರತವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸ್ವಾಗತಿಸಿರುವ ಅಮೆರಿಕ ಹೇಳಿಕೆ ನೀಡಿದೆ.
ಅಮೆರಿಕದ ದಕ್ಷಿಣ ಮತ್ತು ಕೇಂದ್ರೀಯ ಏಶ್ಯ ವ್ಯವಹಾರಗಳ ಇಲಾಖೆ (ಎಸ್ಸಿಎ) ಸೋಮವಾರ ಈ ಸಂಬಂಧ ಟ್ವೀಟ್ ಮಾಡಿದೆ. "ಹಳೆದ ಸ್ನೇಹಿತರು ಮತ್ತು ಪಾಲುದಾರರ ಜತೆಗಿನ ಸಂಬಂಧ ಬಲಗೊಳಿಸಲು ಹೊಸ ವರ್ಷ ಹೊಸ ಅವಕಾಶಗಳನ್ನು ತಂದಿದೆ" ಎಂದು ಎಸ್ಸಿಎ ಅಭಿಪ್ರಾಯಪಟ್ಟಿದೆ.
"ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತವನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ. ವಿಶ್ವಸಂಸ್ಥೆಯಲ್ಲಿರುವ ಕಾಯಂ ಭಾರತೀಯ ಮಿಷನ್ ಜತೆಗೆ ಕಾರ್ಯನಿರ್ವಹಿಸುವ ಮೂಲಕ ಹೆಚ್ಚು ಶಾಂತಿಯುತ ಹಾಗೂ ಸುರಕ್ಷಿತ ಇಂಡೋ-ಫೆಸಿಫಿಕ್ ಪ್ರದೇಶ ಮತ್ತು ವಿಶ್ವವನ್ನು ನಿರ್ಮಿಸುವ ಸಮಾನ ಹಿತಾಸಕ್ತಿಯ ನಿಟ್ಟಿನಲ್ಲಿ ಶ್ರಮಿಸಲಿದ್ದೇವೆ" ಎಂದು ವಿವರಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 2021-22ನೇ ಅವಧಿಗೆ ಖಾಯಂ ಅಲ್ಲದ ಸದಸ್ಯದೇಶವಾಗಿ ಸದಸ್ಯತ್ವ ಸ್ವೀಕರಿಸಿದ ಭಾರತದ ಧ್ವಜವನ್ನು ಭದ್ರತಾ ಮಂಡಳಿಯಲ್ಲಿ ಸೋಮವಾರ ಪ್ರತಿಷ್ಠಾಪಿಸಲಾಗಿದೆ. ಭಾರತ ಈ ಸದಸ್ಯತ್ವ ಹೊಂದುತ್ತಿರುವುದು ಇದು ಎಂಟನೇ ಬಾರಿ.