ರಶ್ಯದಿಂದ ಎಸ್-400 ಖರೀದಿಸಿದರೆ ಭಾರತದ ವಿರುದ್ಧ ದಿಗ್ಬಂಧನ
ಅಮೆರಿಕ ಸಂಸತ್ ವರದಿ

ವಾಶಿಂಗ್ಟನ್, ಜ. 5: ಭಾರತವು ರಶ್ಯದ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದರೆ ಅಮೆರಿಕದ ಆರ್ಥಿಕ ದಿಗ್ಬಂಧನಕ್ಕೆ ಒಳಗಾಗಬಹುದು ಎಂದು ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ವರದಿಯೊಂದು ಎಚ್ಚರಿಸಿದೆ.
‘‘ಭಾರತವು ತಂತ್ರಜ್ಞಾನ ಹಂಚಿಕೆ ಮತ್ತು ಸಹ-ಉತ್ಪಾದನೆ ಬಗ್ಗೆ ಹೆಚ್ಚು ಉತ್ಸುಕವಾಗಿದೆ. ಆದರೆ, ಭಾರತದ ರಕ್ಷಣಾ ನೀತಿಯಲ್ಲಿ ಸುಧಾರಣೆಯಾಗಬೇಕೆಂದು ಹಾಗೂ ರಕ್ಷಣಾ ಕ್ಷೇತ್ರದ ವಿದೇಶಿ ನೇರ ಹೂಡಿಕೆ ಮಿತಿಯನ್ನು ಹೆಚ್ಚಿಸಬೇಕೆಂದು ಅಮೆರಿಕ ಬಯಸಿದೆ’’ ಎಂದು ಅಮೆರಿಕ ಕಾಂಗ್ರೆಸ್‌ನ ಸರ್ವಪಕ್ಷ ಸದಸ್ಯರನ್ನೊಳಗೊಂಡ ಸ್ವತಂತ್ರ ಸಂಶೋಧನಾ ಘಟಕವಾಗಿರುವ ಕಾಂಗ್ರೆಶ್ಶನಲ್ ರಿಸರ್ಚ್ ಸರ್ವಿಸ್ (ಸಿಆರ್‌ಎಸ್) ಹೇಳಿದೆ.
ಕಾಂಗ್ರೆಸ್‌ನ ಸದಸ್ಯರು ಮಾಹಿತಿಪೂರ್ಣ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತೆ ಅವರಿಗಾಗಿ ಈ ವರದಿಯನ್ನು ತಯಾರಿಸಲಾಗಿದೆ.
‘‘ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಪಡೆದುಕೊಳ್ಳಲು ರಶ್ಯದೊಂದಿಗೆ ಭಾರತ ಮಾಡಿಕೊಂಡಿರುವ ಬೃಹತ್ ಮೊತ್ತದ ಒಪ್ಪಂದವು, ‘ಅವೆುರಿಕದ ವೈರಿಗಳನ್ನು ದಿಗ್ಬಂಧನದ ಮೂಲಕ ಎದುರಿಸುವ ಕಾಯ್ದೆ’ಯನ್ನು ಉಲ್ಲಂಘಿಸಬಹುದಾಗಿದೆ ಎಂದು ವರದಿ ಹೇಳುತ್ತದೆ.
ಸಿಆರ್‌ಎಸ್‌ನ ವರದಿಯು ಅಮೆರಿಕ ಕಾಂಗ್ರೆಸ್‌ನ ಅಧಿಕೃತ ವರದಿಯೂ ಅಲ್ಲ, ಅದು ಸಂಸದರ ಅಭಿಪ್ರಾಯವನ್ನು ಧ್ವನಿಸುವುದೂ ಇಲ್ಲ. ಸಂಸದರು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತೆ ಸಂಸದರ ಸ್ವತಂತ್ರ ಪರಿಣತರು ಈ ವರದಿಯನ್ನು ಸಿದ್ಧಪಡಿಸುತ್ತಾರೆ.
ಅಮೆರಿಕದ ಟ್ರಂಪ್ ಆಡಳಿತದ ಎಚ್ಚರಿಕೆಯ ಹೊರತಾಗಿಯೂ, ಐದು ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸುವುದಕ್ಕಾಗಿ 2018 ಅಕ್ಟೋಬರ್‌ನಲ್ಲಿ ಭಾರತವು ರಶ್ಯದೊಂದಿಗೆ ಸಹಿ ಹಾಕಿತ್ತು. ಎಸ್-400 ರಶ್ಯದ ಅತ್ಯಂತ ಸುಧಾರಿತ ಮೇಲ್ಮೈಯಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಗಳನ್ನೊಳಗೊಂಡ ರಕ್ಷಣಾ ವ್ಯವಸ್ಥೆಯಾಗಿದೆ.
ಪ್ಯಾರಿಸ್‌ನಲ್ಲೂ ರೂಪಾಂತರಿತ ಕೊರೋನ ಪ್ರಕರಣಗಳು
ಪ್ಯಾರಿಸ್ (ಫ್ರಾನ್ಸ್), ಡಿ. 5: ಕೊರೋನ ವೈರಸ್‌ನ ರೂಪಾಂತರಿತ ಪ್ರಭೇದವು ಪ್ಯಾರಿಸ್‌ನಲ್ಲೂ ಪತ್ತೆಯಾಗಿದೆ ಎಂದು ಪ್ಯಾರಿಸ್ ಹಾಸ್ಪಿಟಲ್ಸ್ ಸಿಸ್ಟಮ್‌ನ ಮಹಾನಿರ್ದೇಶಕ ಮಾರ್ಟಿನ್ ಹಿರ್ಶ್ ಮಂಗಳವಾರ ‘ಫ್ರಾನ್ಸ್ 2’ ಟಿವಿಗೆ ತಿಳಿಸಿದ್ದಾರೆ.
ಬ್ರಿಟನ್‌ನಲ್ಲಿ ಪತ್ತೆಯಾಗಿರುವ ರೂಪಾಂತರಿತ ಕೊರೋನ ವೈರಸ್ ಪ್ರಭೇದದ ಸುಮಾರು 10 ಪ್ರಕರಣಗಳು ಫ್ರಾನ್ಸ್‌ನಲ್ಲಿ ಇವೆ ಎಂಬುದಾಗಿ ಇದಕ್ಕೂ ಮೊದಲು ಫ್ರಾನ್ಸ್ ಆರೋಗ್ಯ ಸಚಿವ ಒಲಿವಿಯರ್ ವೆರನ್ ‘ಆರ್‌ಟಿಎಲ್ ರೇಡಿಯೊ’ಗೆ ಹೇಳಿದ್ದರು.







