ತಾಂಝಾನಿಯಾ ಅಧ್ಯಕ್ಷರ ಸಾವಿನ ಸುತ್ತ ಸಂಶಯದ ಹುತ್ತ

Photo credit: Twitter @MagufuliJP
ನೈರೋಬಿ, ಮಾ.18: ತಾಂಝಾನಿಯಾದ ಅಧ್ಯಕ್ಷ ಜಾನ್ ಮುಗುಫುಲಿ ಮೃತಪಟ್ಟಿರುವುದನ್ನು ಮಂಗಳವಾರ ಉಪಾಧ್ಯಕ್ಷೆ ಸಮಿಯಾ ಸುಲುಹು ಹಸನ್ ಘೋಷಿಸಿದ್ದಾರೆ. ಮುಗುಫುಲಿ ಕಳೆದ ಎರಡು ವಾರಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದರಿಂದ ಅವರ ಆರೋಗ್ಯ ಸ್ಥಿತಿ ಬಗ್ಗೆ ದಟ್ಟ ವದಂತಿ ಹಬ್ಬಿತ್ತು. ಮುಗುಫಿಲಿ ಅವರಿಗೆ ಕೋವಿಡ್-19 ಸೋಂಕು ತಗುಲಿದೆ ಎಂಬ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಮುಗುಫಿಲಿ ಅಸ್ವಸ್ಥಗೊಂಡಿಲ್ಲ ಎಂದು ಮಾರ್ಚ್ 12ರಂದು ಅಧಿಕಾರಿಗಳು ಹೇಳಿಕೆ ನೀಡಿದ್ದರು. ಇವರು ಅಧಿಕಾರದಲ್ಲಿದ್ದಾಗಲೇ ಮೃತಪಟ್ಟ ದೇಶದ ಮೊದಲ ಅಧ್ಯಕ್ಷ ಎನಿಸಿಕೊಂಡಿದ್ದಾರೆ.
"ಆತ್ಮೀಯ ತಾಂಝಾನಿಯಾ ಪ್ರಜೆಗಳೇ, 17ನೇ ಮಾರ್ಚ್ 2021ರಂದು ಸಂಜೆ 6 ಗಂಟೆಗೆ ನಮ್ಮ ಧೀರ ನಾಯಕ, ಅಧ್ಯಕ್ಷ ಜಾನ್ ಮುಗುಫುಲಿ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ದರ್ ಎಸ್ ಸಲಾಂನ ಝೆನಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲು ತೀವ್ರ ದುಃಖವಾಗುತ್ತಿದೆ" ಎಂದು ಉಪಾಧ್ಯಕ್ಷರು ಸರಕಾರಿ ಚಾನಲ್ ಟಿಬಿಸಿಯಲ್ಲಿ ಪ್ರಕಟಿಸಿದರು.
ಅವರ ದಫನಕ್ಕೆ ಸಿದ್ಧತೆಗಳು ನಡೆದಿದ್ದು, ದೇಶಾದ್ಯಂತ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಿ 14 ದಿನಗಳ ಶೋಕಾಚರಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಪ್ರಧಾನಿ ಕಾಸಿಂ ಮಜಲಿವಾಲ ಹೇಳಿಕೆ ನೀಡಿ, ಕಳೆದ ಶುಕ್ರವಾರ ಮುಗುಫುಲಿ ಜತೆ ಚರ್ಚೆ ನಡೆಸಿದ್ದೆ ಎಂದು ಸ್ಪಷ್ಟಪಡಿಸಿದ್ದು, ವಿದೇಶಗಳಲ್ಲಿ ನೆಲೆಸಿರುವ ಕೆಲ ತಾಂಝಾನಿಯಾ ಪ್ರಜೆಗಳು ಅಧ್ಯಕ್ಷರ ಅಸ್ವಸ್ಥತೆ ಬಗ್ಗೆ ದ್ವೇಷಪೂರ್ವಕ ಸುಳ್ಳುಸುದ್ದಿ ಹಬ್ಬಿಸಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ನಡೆದ ಚುನಾವಣೆಯಲ್ಲಿ ಎರಡನೇ ಬಾರಿಗೆ ಮುಗುಫಲಿ ಆಯ್ಕೆಯಾಗಿದ್ದರು. ಮುಗಫಿಲಿಯವರ ಪ್ರತಿಸ್ಪರ್ಧಿ ತುಂಡು ಲಿಸ್ಸು ಇತ್ತೀಚೆಗೆ ಹೇಳಿಕೆ ನೀಡಿ, ತಾಂಝಾನಿಯಾ ಅಧ್ಯಕ್ಷರು ಕೋವಿಡ್-19 ಚಿಕಿತ್ಸೆಗಾಗಿ ಕೀನ್ಯಾಗೆ ತೆರಳಿದ್ದಾರೆ. ಬಳಿಕ ಪ್ರಜ್ಞೆ ಕಳೆದುಕೊಂಡಿರುವ ಅವರನ್ನು ಭಾರತಕ್ಕೆ ಸಾಗಿಸಲಾಗಿದೆ ಎಂದು ತಿಳಿಸಿದ್ದರು.
ತಾಂಜಾನಿಯಾದ ಸಂವಿಧಾನದ ಪ್ರಕಾರ, ಉಪಾಧ್ಯಕ್ಷರಾಗಿರುವ ಹಸನ್ (61) ಅವರು ಐದು ವರ್ಷಗಳ ಅಧಿಕಾರಾವಧಿಯಲ್ಲಿ ಬಾಕಿ ಉಳಿದಿರುವ ಅವಧಿಗೆ ದೇಶದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.