ಪುಟಿನ್ ‘ಕೊಲೆಗಾರ’ ಎಂದಿದ್ದಕ್ಕೆ ಬೈಡನ್ಗೆ ವಿಷಾದವಿಲ್ಲ: ಶ್ವೇತಭವನ

ವಾಶಿಂಗ್ಟನ್, ಮಾ. 19: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಓರ್ವ ಕೊಲೆಗಾರ ಎಂಬ ಅಮೆರಿಕ ಅಧ್ಯಕ್ಷ ಜೋ ಬೈಡನ್ರ ಹೇಳಿಕೆಯನ್ನು ಅವರ ಆಡಳಿತ ಕಚೇರಿ ಮತ್ತು ನಿವಾಸವಾಗಿರುವ ಶ್ವೇತಭವನ ಗುರುವಾರ ಸಮರ್ಥಿಸಿದೆ.
ಬೈಡನ್ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತಾರೆಯೇ ಎಂಬುದಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ, ‘‘ಇಲ್ಲ, ಅಧ್ಯಕ್ಷರು ನೇರ ಪ್ರಶ್ನೆಯೊಂದಕ್ಕೆ ನೇರ ಉತ್ತರ ನೀಡಿದ್ದಾರೆ’’ ಎಂದು ಹೇಳಿದರು.
ಬುಧವಾರ ‘ಎಬಿಸಿ ನ್ಯೂಸ್’ಗೆ ನೀಡಿದ ಸಂದರ್ಶನವೊಂದರಲ್ಲಿ, ಪುಟಿನ್ ಓರ್ವ ಕೊಲೆಗಾರ ಎಂಬುದಾಗಿ ನೀವು ಭಾವಿಸುವಿರೇ ಎಂಬುದಾಗಿ ಬೈಡನ್ರನ್ನು ಕೇಳಲಾಗಿತ್ತು. ಅದಕ್ಕೆ ‘‘ಹೌದು’’ ಎಂಬುದಾಗಿ ಅವರು ಉತ್ತರಿಸಿದ್ದರು.
‘ನೇರಪ್ರಸಾರ’ದ ಚರ್ಚೆಗೆ ಬೈಡನ್ರನ್ನು ಆಹ್ವಾನಿಸಿದ ಪುಟಿನ್
ತನ್ನನ್ನು ಕೊಲೆಗಾರ ಎಂಬುದಾಗಿ ಕರೆದ ಅಮೆರಿಕ ಅಧ್ಯಕ್ಷ ಜೋ ಬೈಡನ್ರನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಮುಖಾಮುಖಿ ಆನ್ಲೈನ್ ಚರ್ಚೆಗೆ ಆಹ್ವಾನಿಸಿದ್ದಾರೆ.
‘‘ಮುಂದಿನ ದಿನಗಳಲ್ಲಿ ನಮ್ಮ ಚರ್ಚೆಯನ್ನು ಮುಂದುವರಿಸಲು ನಾನು ಅಧ್ಯಕ್ಷ ಬೈಡನ್ರನ್ನು ಆಹ್ವಾನಿಸುತ್ತೇನೆ. ಆದರೆ, ಅದು ನೇರ ಪ್ರಸಾರದ ಅಥವಾ ಆನ್ಲೈನ್ ಚರ್ಚೆಯಾಗಿರಬೇಕು’’ ಎಂದು ಕ್ರೈಮಿಯ ರಶ್ಯಕ್ಕೆ ಸೇರ್ಪಡೆಗೊಂಡ ಏಳನೇ ವರ್ಷದ ಸಂದರ್ಭದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದರು.