ಮತ್ತೆ ಕೋವಿಡ್ ಅಬ್ಬರದಿಂದ ಕುಗ್ಗಿದ ಕಚ್ಚಾತೈಲ ಬೆಲೆ: ದೇಶಿಯ ಇಂಧನ ದರಗಳೂ ಇಳಿಯುವ ನಿರೀಕ್ಷೆ

ಹೊಸದಿಲ್ಲಿ,ಮಾ.29: ಅಂತರ್ರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಸೋಮವಾರ ಪ್ರತಿ ಬ್ಯಾರೆಲ್‌ಗೆ 60 ಡಾಲರ್ ಗಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದೇಶೀಯ ಇಂಧನ ಬೆಲೆಗಳು ಇಳಿಕೆಯಾಗಲಿವೆ ಎಂಬ ನಿರೀಕ್ಷೆಗಳು ಗರಿಗೆದರಿವೆ.
ಯುರೋಪ್‌ನ ಹೆಚ್ಚಿನ ದೇಶಗಳಲ್ಲಿ ಕೋವಿಡ್-19 ಸೋಂಕು ಪ್ರಕರಣಗಳಲ್ಲಿ ತೀವ್ರ ಏರಿಕೆ ಮುಂದುವರಿದಿರುವಂತೆ ಅಂತರರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ಕುಸಿದಿವೆ. ಹೊಸ ಕೊರೋನ ಅಲೆಯಿಂದಾಗಿ ಚೇತರಿಕೆಯ ಮಾರ್ಗದಲ್ಲಿರುವ ಆರ್ಥಿಕತೆಯು ಮಂದಗೊಳ್ಳುವ ಭೀತಿ ಜಾಗತಿಕ ಮಟ್ಟದಲ್ಲಿ ಮತ್ತೆ ಹೊರಹೊಮ್ಮಿದೆ. ಸದ್ಯ ಕಚ್ಚಾ ತೈಲ ಬೆಲೆಗಳು ನಕಾರಾತ್ಮಕ ಸುದ್ದಿಗಳ ಪ್ರಭಾವದಿಂದಾಗಿ ಇಳಿಮುಖಗೊಳ್ಳುತ್ತಿವೆ.
ಸೋಮವಾರ ಬೆಂಚ್ ಕ್ರೂಡ್‌ನ ವಾಯಿದಾ ದರ ಪ್ರತಿ ಬ್ಯಾರೆಲ್‌ಗೆ 60 ಡಾ.ಗಿಂತ ಕೆಳಕ್ಕೆ ಕುಸಿದಿದ್ದು,ಅಮೆರಿಕದ ಕಚ್ಚಾತೈಲ ಕೂಡ ದರ ಇಳಿಕೆಯ ಹೊಡೆತಕ್ಕೆ ಸಿಲುಕಿದೆ.
ಹೆಚ್ಚುತ್ತಿರುವ ಕೊರೋನವೈರಸ್ ಪ್ರಕರಣಗಳು ಮತ್ತು ಬೇಡಿಕೆಯಲ್ಲಿ ಕುಸಿತದಿಂದಾಗಿ ಕಚ್ಚಾತೈಲ ಬೆಲೆಗಳು ಇಳಿಕೆಯಾಗುವ ನಿರೀಕ್ಷೆಯಿದೆ. ಚೀನಾದಿಂದ ಆಮದು ಪ್ರಮಾಣ ತಗ್ಗಿರುವುದೂ ಕಚ್ಚಾತೈಲದ ಪಾಲಿಗೆ ನಕಾರಾತ್ಮಕ ಅಂಶವಾಗಿದೆ ಎಂದು ಹೇಳಿದ ಐಐಎಫ್‌ಎಲ್ ಸೆಕ್ಯೂರಿಟಿಸ್‌ನ ಉಪಾಧ್ಯಕ್ಷ (ಸಂಶೋಧನೆ) ಅನುಜ ಗುಪ್ತಾ ಅವರು,ಅಲ್ಲದೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಶೇರು ಮಾರುಕಟ್ಟೆಯಲ್ಲಿ ಕುಸಿತದಿಂದಾಗಿ ರೂಪಾಯಿ ಕೂಡ ಅಪಮೌಲ್ಯಗೊಳ್ಳುವ ನಿರೀಕ್ಷೆಯಿದೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಳಿಕೆಯಾಗಬಹುದು ಎಂದರು.
ಸದ್ಯ ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ 90.78 ರೂ. ಮತ್ತು ಡೀಸೆಲ್ 81.10 ರೂ.ಗೆ ಮಾರಾಟವಾಗುತ್ತಿವೆ.