ಬಿಜೆಪಿ ವಿರುದ್ಧ ಒಗ್ಗಟ್ಟು: ದೀದಿ ನಿಲುವಿಗೆ ಕಾಂಗ್ರೆಸ್ ಬೆಂಬಲ
ಎಐಸಿಸಿ ವಕ್ತಾರ ರಾಜೀವ್ ಶುಕ್ಲಾ (Photo: Twitter @ShuklaRajiv)
ಹೊಸದಿಲ್ಲಿ, ಎ.2: ಎಲ್ಲ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡಬೇಕು ಎಂದು ಆಗ್ರಹಿಸಿ ಮಮತಾ ಬ್ಯಾನರ್ಜಿ ಪತ್ರ ಬರೆದ ಬೆನ್ನಲ್ಲೇ ದೀದಿ ನಿಲುವನ್ನು ಬೆಂಬಲಿಸಿ ಕಾಂಗ್ರೆಸ್ ಹೇಳಿಕೆ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಎರಡೂ ಪಕ್ಷಗಳು ಪರಸ್ಪರ ಸೆಣಸುತ್ತಿದ್ದರೂ, ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸುವ ವಿಚಾರದಲ್ಲಿ ಮಮತಾ ಸಲಹೆಯನ್ನು ಬೆಂಬಲಿಸಿದೆ.
"ಬಿಜೆಪಿ ದಾಳಿಯಿಂದ ಸಂವಿಧಾನವನ್ನು ರಕ್ಷಿಸಬೇಕು" ಎಂಬ ಕಾಂಗ್ರೆಸ್ ಪಕ್ಷದ ನಿಲುವನ್ನು ಈ ಪತ್ರ ಬಿಂಬಿಸಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ಮಮತಾ ಪತ್ರದ ಬಗ್ಗೆ ಕಾಂಗ್ರೆಸ್ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಎಐಸಿಸಿ ವಕ್ತಾರ ರಾಜೀವ್ ಶುಕ್ಲಾ, "ವಿರೋಧ ಪಕ್ಷಗಳ ಏಕತೆಯ ಭಾವನೆ ಸದಾ ಕಾಂಗ್ರೆಸ್ ಪಕ್ಷದಲ್ಲಿ ಇದೆ. ಬಿಜೆಪಿ ಸರ್ಕಾರ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳುತ್ತಲೇ ಬಂದಿದ್ದಾರೆ. ಈ ದಾಳಿಯ ವಿರುದ್ಧ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಪಕ್ಷ ಹೇಳುತ್ತಲೇ ಬಂದಿದೆ" ಎಂದು ಸ್ಪಷ್ಟಪಡಿಸಿದರು.
ಮೋದಿ ಸರ್ಕಾರ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ ಎಂದು ಆಪಾದಿಸಿ ಕಾಂಗ್ರೆಸ್ ನಾಯಕರು ರಾಜ್ಘಾಟ್ನಲ್ಲಿ ಒಂದು ದಿನ ಧರಣಿಯನ್ನೂ ನಡೆಸಿದ್ದರು ಎಂದು ಶುಕ್ಲಾ ವಿವರಿಸಿದರು.