ಮಾವೋವಾದಿಗಳೊಂದಿಗೆ ಎನ್ ಕೌಂಟರ್: 18 ಭದ್ರತಾ ಸಿಬ್ಬಂದಿಗಳು ನಾಪತ್ತೆ

ರಾಯ್ಪುರ: ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಮಾವೋವಾದಿಗಳೊಂದಿಗೆ ನಡೆಸಿರುವ ಎನ್ ಕೌಂಟರ್ ನಲ್ಲಿ ಕರ್ತವ್ಯದಲ್ಲಿದ್ದ ಒಟ್ಟು 8 ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದು, ಸುಮಾರು 18 ಭದ್ರತಾ ಸಿಬ್ಬಂದಿಗಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಛತ್ತೀಸ್ ಗಢ ಪೊಲೀಸ್ ಮಹಾನಿರ್ದೇಶಕ(ನಕ್ಸಲ್ ಕಾರ್ಯಾಚರಣೆ)ಅಶೋಕ್ ಜುನೆಜಾ, ಎನ್ ಕೌಂಟರ್ ನಲ್ಲಿ ಶನಿವಾರ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಇಂದು ಈ ಸಂಖ್ಯೆ 8ಕ್ಕೇರಿಕೆಯಾಗಿದೆ ಎಂದು ಹೇಳಿದರು.
ಮಾವೋವಾದಿಗಳ ಭದ್ರಕೋಟೆಯೆಂದು ಪರಿಗಣಿಸಲ್ಪಟ್ಟಿರುವ ದಕ್ಷಿಣ ಬಸ್ತಾರ್ ಅರಣ್ಯದಲ್ಲಿ ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಗಳಿಂದ ಶನಿವಾರ 2000ಕ್ಕೂ ಅಧಿಕ ಸಿಬ್ಬಂದಿಗಳೊಂದಿಗೆ ಭದ್ರತಾ ಪಡೆಗಳ ಪ್ರತ್ಯೇಕ ಜಂಟಿ ತಂಡಗಳು ಪ್ರಮುಖ ಕಾರ್ಯಾಚರಣೆಯನ್ನು ಆರಂಭಿಸಿದ್ದವು. ಮಧ್ಯಾಹ್ನ ಸುಮಾರು 12 ಗಂಟೆಗೆ ಮಾವೋವಾದಿಗಳು ಹೊಂಚುದಾಳಿಯನ್ನು ನಡೆಸಿದ್ದು, ಇದು 3 ಗಂಟೆಗಳ ಕಾಲ ನಡೆದು ಎನ್ಕೌಂಟರ್ ಗೆ ಕಾರಣವಾಯಿತು.
ರವಿವಾರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದರು. ಪರಿಸ್ಥಿತಿಯನ್ನು ನಿಭಾಯಿಸಲು ಛತ್ತೀಸ್ಗಢಕ್ಕೆ ಭೇಟಿ ನೀಡುವಂತೆ ಶಾ ಅವರು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ಮಹಾ ನಿರ್ದೇಶಕ ಕುಲದೀಪ್ ಸಿಂಗ್ ಅವರಿಗೆ ನಿರ್ದೇಶನ ನೀಡಿದರು.