18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆ ಲಭ್ಯಗೊಳಿಸಿ, ಸೀಮಿತ ಲಾಕ್‌ಡೌನ್ ಹೇರಿ
ಪ್ರಧಾನಿ ಮೋದಿಗೆ ಭಾರತೀಯ ವೈದ್ಯಕೀಯ ಸಂಘ ಆಗ್ರಹ
ಹೊಸದಿಲ್ಲಿ,ಎ.6: ದೇಶದಲ್ಲಿ ಕೊರೋನವೈರಸ್ ಪ್ರಕರಣಗಳ ಏರಿಕೆಯ ನಡುವೆಯೇ ಭಾರತೀಯ ವೈದ್ಯಕೀಯ ಸಂಘ(ಐಎಂಎ)ವು,18 ವರ್ಷ ಮೇಲ್ಪಟ್ಟ ಎಲ್ಲ ಪ್ರಜೆಗಳಿಗೂ ಕೋವಿಡ್-19 ಲಸಿಕೆಯನ್ನು ಲಭ್ಯಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮಂಗಳವಾರ ಆಗ್ರಹಿಸಿದೆ.
ವಿಶೇಷವಾಗಿ ಸಿನಿಮಾ ಮಂದಿರಗಳಂತಹ ಅಗತ್ಯವಲ್ಲದ ಪ್ರದೇಶಗಳು,ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತ ಅವಧಿಗೆ ನಿರಂತರ ಲಾಕ್‌ಡೌನ್ ಹೇರುವಂತೆಯೂ ಐಎಂಎ ಸಲಹೆ ನೀಡಿದೆ.
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ವಿತರಣೆಗೆ ವಯೋಮಿತಿಯನ್ನು ತಗ್ಗಿಸುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರೂ ಕೇಂದ್ರವನ್ನು ಕೋರಿಕೊಂಡಿದ್ದರು.
ಕೊರೋನ ವೈರಸ್ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ಗುಂಪು ಪ್ರತಿರೋಧಕತೆ ಬೆಳೆಯುವಂತೆ ಮಾಡಲು ಲಸಿಕೆ ನೀಡಿಕೆಯು ಏಕೈಕ ಪುರಾವೆ ಆಧಾರಿತ ಸಂಪನ್ಮೂಲವಾಗಿದೆ ಎಂದಿರುವ ಐಎಂಎ,ರೋಗವು ತ್ವರಿತವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆ ಕಾರ್ಯತಂತ್ರವನ್ನು ಸರ್ವಸನ್ನದ್ಧಗೊಳಿಸುವ ಮತ್ತು ತಕ್ಷಣದಿಂದಲೇ ಸಮರೋಪಾದಿಯಲ್ಲಿ ಅದನ್ನು ನಡೆಸುವ ಅಗತ್ಯವಿದೆ. ದೇಶದ ಎಲ್ಲ ಪ್ರಜೆಗಳಿಗೆ ತಮ್ಮ ಸಮೀಪದ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ಲಭ್ಯವಾಗಬೇಕು. ಲಸಿಕೆ ನೀಡಿಕೆ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಗಳ ಜೊತೆಗೆ ಖಾಸಗಿ ಫ್ಯಾಮಿಲಿ ಕ್ಲಿನಿಕ್‌ಗಳನ್ನೂ ಸಕ್ರಿಯವಾಗಿ ತೊಡಗಿಸಬೇಕು ಎಂದು ಹೇಳಿದೆ.
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ ಜಿಲ್ಲಾಮಟ್ಟದ ಲಸಿಕೆ ಕಾರ್ಯಪಡೆ ತಂಡಗಳನ್ನು ರೂಪಿಸುವಂತೆ ಆಗ್ರಹಿಸಿರುವ ಐಎಂಎ,ಈ ಯೋಜನೆಯಲ್ಲಿ ತಾನು ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.
ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಲು ಮತ್ತು ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ಉತ್ಪನ್ನಗಳನ್ನು ಪಡೆದುಕೊಳ್ಳಲು ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರಗಳನ್ನು ಕಡ್ಡಾಯಗೊಳಿಸಬೇಕು ಎಂದೂ ಅದು ಸಲಹೆ ನೀಡಿದೆ.
ಸರಕಾರದ ಅಸಾಧಾರಣ ನಿಯಂತ್ರಣ ಕ್ರಮಗಳ ಹೊರತಾಗಿಯೂ ಕೊರೋನವೈರಸ್ ಸಾಂಕ್ರಾಮಿಕದ ಎರಡನೇ ಅಲೆಯು ದಾಖಲೆಯ ಎತ್ತರವನ್ನು ತಲುಪುತ್ತಿರುವುದು ತನಗೆ ನೋವನ್ನುಂಟು ಮಾಡಿದೆ ಎಂದಿರುವ ಐಎಂಎ,ಈ ಬಿಕ್ಕಟ್ಟಿನ ಸಮಯದಲ್ಲಿ ಸರಕಾರಕ್ಕೆ ತನ್ನ ಬೆಂಬಲದ ಭರವಸೆಯನ್ನು ನೀಡಿದೆ.