ಬಂಧನದಿಂದ ತಪ್ಪಿಸಿಕೊಳ್ಳಲು ಲಕ್ಷಾಂತರ ಹಣವನ್ನು ಈ ಭ್ರಷ್ಟ ಮಾಡಿದ್ದೇನು ಗೊತ್ತೇ?

ಸಾಂದರ್ಭಿಕ ಚಿತ್ರ
ಹೈದರಾಬಾದ್, ಎ.7: ಲಂಚದ ಹಣವನ್ನು ಸ್ವೀಕರಿಸಲು ತಹಶೀಲ್ದಾರನಿಂದ ನಿಯೋಜಿತನಾಗಿದ್ದನೆನ್ನಲಾದ ವ್ಯಕ್ತಿಯೊಬ್ಬ ಬಂಧನದಿಂದ ತಪ್ಪಿಸಿಕೊಳ್ಳಲು ತನ್ನ ಮನೆಯಲ್ಲಿ ಐದು ಲಕ್ಷ ರೂ. ನಗದು ಸುಟ್ಟುಹಾಕಿರುವ ಪ್ರಕರಣ ತೆಲಂಗಾಣದ ನಾಗರಕುರ್ನೂಲು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ ಎಂದು ಭ್ರಷ್ಟಾಚಾರ ನಿಗ್ರಹ ಪಡೆ (ಎಸಿಬಿ) ಹೇಳಿದೆ.
ಐದು ಲಕ್ಷ ರೂಪಾಯಿ ಲಂಚದ ಹಣದ ಪೈಕಿ 2000 ರೂಪಾಯಿ ಮುಖಬೆಲೆಯ 46 ನೋಟುಗಳು ಸಂಪೂರ್ಣ ಸುಟ್ಟುಹೋಗಿದ್ದು, 500 ಮತ್ತು 2000 ರೂಪಾಯಿ ಮುಖಬೆಲೆಯ ಇತರ ಹಲವು ನೋಟುಗಳು ಭಾಗಶಃ ಸುಟ್ಟುಹೋಗಿವೆ ಎಂದು ಎಸಿಬಿ ಅಧಿಕಾರಿ ಹೇಳಿದ್ದಾರೆ.
ಕಲ್ಲು ಗಣಿಗಾರಿಕೆ ಲೈಸನ್ಸ್ ಪಡೆಯಲು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಓಸಿ) ನೀಡಲು ಐದು ಲಕ್ಷ ರೂಪಾಯಿ ನೀಡುವಂತೆ ವೆಲ್ದಂಡ ಮಂಡಲದ ತಹಶೀಲ್ದಾರ್ ಬೇಡಿಕೆ ಇಟ್ಟಿದ್ದರು ಎಂದು ಆಪಾದಿಸಲಾಗಿದ್ದು, ಈ ಹಣವನ್ನು ಸಂಗ್ರಹಿಸಲು ಖಾಸಗಿ ವ್ಯಕ್ತಿಯೊಬ್ಬರಿಗೆ ಸೂಚಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ಎನ್ಓಸಿ ಬಯಸಿದ ವ್ಯಕ್ತಿ ಎಸಿಬಿಗೆ ದೂರು ನೀಡಿದ್ದರು. ಎಸಿಬಿ ಅಧಿಕಾರಿಗಳು ಬಲೆ ಬೀಸಿದ ಸುಳಿವು ಸಿಕ್ಕಿದ ಖಾಸಗಿ ವ್ಯಕ್ತಿ ತನ್ನ ಮನೆಯ ಒಳಗೆ ಕೊಠಡಿಗೆ ಹೋಗಿ ಬೋಲ್ಟ್ ಹಾಕಿಕೊಂಡು ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸ್ಟವ್ ಬಳಸಿ ಲಂಚದ ಹಣವನ್ನು ಸುಟ್ಟುಹಾಕಿದ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಅಧಿಕಾರಿಗಳು ಭಾಗಶಃ ಸುಟ್ಟ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ತಹಶೀಲ್ದಾರರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.