ಭಾರತದ ನಗರ ಪ್ರದೇಶಗಳಲ್ಲಿಯ ಐದು ಕೋ.ಜನರು ಸುರಕ್ಷಿತ ಕುಡಿಯುವ ನೀರಿನಿಂದ ವಂಚಿತರು: ವರದಿ

ಸಾಂದರ್ಭಿಕ ಚಿತ್ರ (source PTI)
ಹೊಸದಿಲ್ಲಿ, ಎ.24: ಭಾರತದ 15 ನಗರಗಳಲ್ಲಿಯ ಐದು ಕೋಟಿ ಜನರು ಸುರಕ್ಷಿತ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ ಎನ್ನುವುದನ್ನು ಯುನಿಸೆಫ್ ಇಂಡಿಯಾ ವರದಿಯು ಬಹಿರಂಗಗೊಳಿಸಿದೆ.
ಆರೋಗ್ಯಕರ ಕುಡಿಯುವ ನೀರು ಅತ್ಯಂತ ಪ್ರಮುಖ ಅಗತ್ಯಗಳಲ್ಲಿ ಒಂದು ಎನ್ನುವುದರಲ್ಲಿ ಬೇರೆ ಮಾತಿಲ್ಲ. ಅದು ಶರೀರದ ಚಯಾಪಚಯ ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸುವ ಉತ್ತಮ ಆರೋಗ್ಯಕ್ಕೆ ನೆರವಾಗುತ್ತದೆ. ಈಗಿನ ಕೊರೋನವೈರಸ್ ಬಿಕ್ಕಟ್ಟಿನ ಸಮಯದಲ್ಲಿ ನೀರು ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ನೀರಿನ ಯಥೇಚ್ಛ ಸೇವನೆ ಶರೀರವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ ಮತ್ತು ಇದು ನಮ್ಮ ಶರೀರವು ಕೋವಿಡ್ ವೈರಸ್ನ ವಿರುದ್ಧ ಹೋರಾಡಲು ನೆರವಾಗುತ್ತದೆ.
ನೀರಿನ ಕೊರತೆಯ ನಡುವೆ ಬಳಕೆಗೆ ಲಭ್ಯ ನೀರಿನ ಶುದ್ಧತೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಸಾಮಾನ್ಯವಾಗಿ ಜನರು ನೀರನ್ನು ಸೇವಿಸುವ ಮುನ್ನ ಅದು ಸ್ವಚ್ಛವಿದೆಯೇ ಎಂದು ನೋಡುತ್ತಾರೆ. ಸ್ವಚ್ಛವಿದ್ದರೆ ಅದು ಸೇವನೆಗೆ ಯೋಗ್ಯ ಎಂದು ಅವರು ಭಾವಿಸುತ್ತಾರೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅದು ಹಾಗಿರುವುದಿಲ್ಲ. ಸ್ವಚ್ಛವಾಗಿ ಕಂಡುಬರುವ ನೀರು ಯಾವಾಗಲೂ ಸೇವನೆಗೆ ಸುರಕ್ಷಿತವಲ್ಲದಿರಬಹುದು ಎಂದು ಆರೋಗ್ಯಕರ ನೀರಿನ ಬಗ್ಗೆ ತಿಳಿದುಕೊಳ್ಳುವ ಅಗತ್ಯದ ಬಗ್ಗೆ ಮಾತನಾಡಿದ ನ್ಯೂಟ್ರಿಷನಲ್ ಮೆಡಿಸಿನ್ ಕನ್ಸಲ್ಟಂಟ್ ಮಂಜರಿ ಚಂದ್ರ ಹೇಳಿದರು.
ಸುರಕ್ಷಿತ ಕುಡಿಯುವ ನೀರು ಉತ್ತಮ ಆರೋಗ್ಯಕ್ಕೆ ಮುಖ್ಯವಾಗಿದೆ. ಆದರೆ ಈ ಬಗ್ಗೆ ಅರಿವಿರದ ನಗರ ಪ್ರದೇಶಗಳಲ್ಲಿಯ ಭಾರತೀಯರು ಅನಾರೋಗ್ಯಕರ ನೀರನ್ನು ಕುಡಿಯುತ್ತಿದ್ದಾರೆ. ನಗರ ಭಾರತದಲ್ಲಿ ಜನಸಾಂದ್ರತೆ ಹೆಚ್ಚಿರುವುದರಿಂದ ಸುರಕ್ಷಿತ ಕುಡಿಯುವ ನೀರಿನ ಕೊರತೆಯೂ ಹೆಚ್ಚಿದೆ. ಹೀಗಾಗಿ ಹೆಚ್ಚಿನ ಜನರು ಖಾಸಗಿ ಜಲಮೂಲಗಳ ನೀರನ್ನು ಕುಡಿಯುತ್ತಾರೆ. ಆದರೆ ಅದರ ಸುರಕ್ಷಿತತೆಯ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ತಮ್ಮ ಮನೆಗಳಲ್ಲಿಯ ನೀರು ಪೂರೈಕೆ ಕೊಳವೆಗಳಲ್ಲಿಯ ದೋಷಗಳ ಬಗ್ಗೆಯೂ ಅವರು ಗಮನ ಹರಿಸುವುದಿಲ್ಲ ಮತ್ತು ಇವು ಹೆಚ್ಚಾಗಿ ನೀರನ್ನು ಕಲುಷಿತಗೊಳಿಸುತ್ತವೆ. ಮನೆಯ ಛಾವಣಿಗಳ ಮೇಲಿನ ಟ್ಯಾಂಕ್ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸದಿದ್ದರೆ ಅದೂ ನೀರು ಕಲುಷಿತಗೊಳ್ಳಲು ಕಾರಣವಾಗುತ್ತದೆ ಎಂದು ಏಮ್ಸ್ ನ ಸಮುದಾಯ ಔಷಧಿ ವಿಭಾಗದ ಪ್ರೊಫೆಸರ್ ಡಾ.ಸಂಜಯ ರಾಯ್ ಹೇಳಿದರು.