"ಸುಪ್ರೀಂ ಕೋರ್ಟನ್ನು ತಪ್ಪು ದಾರಿಗೆಳೆದಿದ್ದಕ್ಕಾಗಿ ತುಷಾರ್ ಮೆಹ್ತಾ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು"
ಕೇರಳ ಕಾರ್ಯನಿರತ ಪತ್ರಕರ್ತರ ಯೂನಿಯನ್

ತಿರುವನಂತಪುರಂ: ಯೂನಿಯನ್ ಕುರಿತಂತೆ "ಆಧಾರರಹಿತ ಟೀಕೆಗಳನ್ನು'' ಮಾಡಿದ್ದಕ್ಕಾಗಿ ಹಾಗೂ ಸುಪ್ರೀಂ ಕೋರ್ಟನ್ನು ತಪ್ಪು ದಾರಿಗೆಳೆದಿದ್ದಕ್ಕಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಕೇರಳ ಕಾರ್ಯನಿರತ ಪತ್ರಕರ್ತರ ಯೂನಿಯನ್ ಆಗ್ರಹಿಸಿದೆ.
"ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇರಳ ಕಾರ್ಯನಿರತ ಪತ್ರಕರ್ತರ ಯೂನಿಯನ್ ಕುರಿತಂತೆ ಮಾಡಿದ ತಪ್ಪಾದ ವಾದಗಳನ್ನು ವಾಪಸ್ ಪಡೆಯಬೇಕು,'' ಎಂದು ಯೂನಿಯನ್ ಟ್ವೀಟ್ ಮಾಡಿದೆ.
ಬಂಧಿತ ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರಿಗೆ ಉತ್ತಮ ಚಿಕಿತ್ಸೆ ಲಭಿಸುವಂತಾಗಲು ಅವರನ್ನು ದಿಲ್ಲಿಯ ಆಸ್ಪತ್ರೆಗೆ ದಾಖಲಿಸುವ ಕುರಿತಂತೆ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಮೆಹ್ತಾ ಅವರು ಕೇರಳ ಪತ್ರಕರ್ತರ ಯೂನಿಯನ್ ಅನ್ನು "ಪತ್ರಕರ್ತರದ್ದೆಂದು ಹೇಳಲಾದ ಸಂಘಟನೆಯಿದು, ಇದರ ಬಗ್ಗೆ ನನಗೆ ಕೂಡ ತಿಳಿದಿಲ್ಲ. ಈ ವ್ಯಕ್ತಿಯನ್ನು ಬಂಧಿಸಿದಾಗ ಆತ 'ತೇಜಸ್' ಎಂಬ ದಿನಪತ್ರಿಕೆಯ ಕಾರ್ಡ್ ಹೊಂದಿದ್ದ ಹಾಗೂ ಆ ದಿನಪತ್ರಿಕೆ ವರ್ಷಗಳ ಕಾಲ ಕಾರ್ಯಾಚರಿಸಿಲ್ಲ,'' ಎಂದು ಹೇಳಿದ್ದನ್ನು ಯೂನಿಯನ್ ಆಕ್ಷೇಪಿಸಿದೆ.
ತಾನು ಕೇರಳ ಪತ್ರಕರ್ತರ ಕಲ್ಯಾಣ ಹಾಗೂ ಹಕ್ಕುಗಳಿಗಾಗಿ 60 ವರ್ಷಗಳಿಂದ ಕಾರ್ಯಾಚರಿಸುತ್ತಿರುವುದಾಗಿ ಹೇಳಿದ ಯೂನಿಯನ್ ಮಾಧ್ಯಮ ಸದಸ್ಯರಿಗೆ ಪಿಂಚಣಿ ಹಾಗೂ ಸರಕಾರದ ಆರೋಗ್ಯ ಯೋಜನೆಯ ಲಾಭ ದೊರೆಯಲು ಸರಕಾರದ ಜತೆ ಕೈಜೋಡಿಸಿ ಶ್ರಮಿಸುತ್ತಿರುವುದಾಗಿ ಯೂನಿಯನ್ ಹೇಳಿದೆ.
ಪತ್ರಕರ್ತರ ಒಡೆತನದ ಭಾರತದ ಮೊದಲ ಪ್ರೆಸ್ ಕ್ಲಬ್ ಅನ್ನು ಕೊಚ್ಚಿಯಲ್ಲಿ ಕೇರಳ ಕಾರ್ಯನಿರತ ಪತ್ರಕರ್ತರ ಯೂನಿಯನ್ ಸ್ಥಾಪಿಸಿತ್ತು ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
ತನ್ನ ದೂರನ್ನು ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಅಟಾರ್ನಿ ಜನರಲ್ ಮತ್ತಿತರರಿಗೆ ಯೂನಿಯನ್ ಕಳುಹಿಸಿದೆಯಲ್ಲದೆ ತುಷಾರ್ ಮೆಹ್ತಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.
Solicitor General Tushar Mehta Must withdraw his wrong arguments against KUWJ and apologize publicly for trying to mislead the Supreme Court.
— Justice for Siddique Kappan_ KUWJ (@kuwjcampaign) April 28, 2021
KUWJ pic.twitter.com/L5aWJoQtMb