ಮಾಜಿ ಟಿಎಂಸಿ ಶಾಸಕ ಗುಹಾ ಮೇಲೆ ದಾಳಿ: ಬಿಜೆಪಿ ವಿರುದ್ಧ ಪಕ್ಷದ ಆರೋಪ

photo: twitter(@UdayanGuha1)
ಕೋಲ್ಕತಾ,ಮೇ 6: ಪ.ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ದಿನಹಾತಾದ ಮಾಜಿ ಶಾಸಕ ಹಾಗೂ 2021ರಲ್ಲಿ ಸ್ವಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿದ್ದ ಉದಯನ್ ಗುಹಾ ಅವರ ಮೇಲೆ ಗುರುವಾರ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಟಿಎಂಸಿ ಕಾರ್ಯಕರ್ತರ ಮೇಲೆ ದಾಳಿಗಳು ನಡೆದಿದ್ದು,ಅವರ ಮನೆಗಳನ್ನು ಧ್ವಂಸಗೊಳಿಸಲಾಗಿತ್ತು. ಅವರನ್ನು ಭೇಟಿಯಾಗಲು ತೆರಳಿದ್ದ ಗುಹಾ ವಾಪಸ್ ಬರುತ್ತಿರುವಾಗ ದಿನಹಾತಾ ಕ್ಲಬ್ ಬಳಿ ಹೊಂಚು ಹಾಕಿದ್ದ,ಮೊದಲು ಟಿಎಂಸಿಯಲ್ಲಿದ್ದು ಬಳಿಕ ಬಿಜೆಪಿಗೆ ಸೇರಿರುವ ಶಸ್ತ್ರಸಜ್ಜಿತ ಗೂಂಡಾಗಳ ಗುಂಪು ಅವರ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ ಎಂದು ತಿಳಿದು ಬಂದಿದೆ.
ಅವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಇಬ್ಬರು ಪೊಲೀಸರ ಮೇಲೂ ದಾಳಿಗಳನ್ನು ನಡೆಸಿದೆ. ಗುಹಾ ಅವರಿಗೆ ಮೂಳೆ ಮುರಿತದ ಗಾಯಗಳಾಗಿವೆ. ಓರ್ವ ಪೊಲೀಸ್ ಸಿಬ್ಬಂದಿಯ ತಲೆಗೆ ಮೂರು ಹೊಲಿಗೆಗಳನ್ನು ಹಾಕಲಾಗಿದ್ದು,ಇನ್ನೋರ್ವನ ಕಾಲು ಮುರಿದಿದೆ ಎಂದು ದಿನಹಾತಾ ಯುವ ಟಿಎಂಸಿಯ ಅಧ್ಯಕ್ಷ ಮೌಮಿತ ಚಟರ್ಜಿ ತಿಳಿಸಿದರು.