ಮಹಿಳೆಯ ಕೋವಿಡ್ ಸೋಂಕಿನ ಕುರಿತು ಮುಚ್ಚಿಟ್ಟು ಆಕೆಯ ಶ್ರಾದ್ಧಕ್ಕೆ 600 ಜನರಿಗೆ ಊಟ ಹಾಕಿದ ಕುಟುಂಬ
ಸಾಂದರ್ಭಿಕ ಚಿತ್ರ
ಪಾಟ್ನಾ: ಬಿಹಾರದ ರೋಹ್ಟಸ್ ಜಿಲ್ಲೆಯ ಬರೋನ್ ಗ್ರಾಮದ ನಿವಾಸಿ, ಕೋವಿಡ್ ಸೋಂಕಿಗೊಳಗಾಗಿ ಮೃತಪಟ್ಟ 85 ವರ್ಷದ ಊರ್ಮಿಳಾ ದೇವಿಯ ಅಂತ್ಯಸಂಸ್ಕಾರಕ್ಕೆ ಕೇವಲ ಒಂದು ಡಜನ್ ಸಂಬಂಧಿಕರು ಮಾತ್ರ ಹಾಜರಿದ್ದರು. ಆದರೆ ಇತ್ತೀಚೆಗೆ ಮಹಿಳೆಯ ಶ್ರಾದ್ಧ ನಡೆದಾಗ ಬರೋಬ್ಬರಿ 600 ಮಂದಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು ಎಂದು theprint.in ವರದಿ ಮಾಡಿದೆ.
ಊರ್ಮಿಳಾ ದೇವಿಗೆ ಇತ್ತೀಚೆಗೆ ಜ್ವರ, ಕೆಮ್ಮು, ಎದೆ ನೋವು ಕಾಡಿದಾಗ, ಅದು ಕೋವಿಡ್ ಇರಬಹುದೆಂಬ ಶಂಕೆಯಿದ್ದರೂ ಕುಟುಂಬ ಆಕೆಯ ಪರೀಕ್ಷೆಗೆ ತಕ್ಷಣ ಮುಂದಾಗಿರಲಿಲ್ಲ. ಒಂದು ವೇಳೆ ಪಾಸಿಟಿವ್ ಬಂದರೆ ಐಸೊಲೇಶನ್ನಲ್ಲಿರಬೇಕಾಗುವುದರಿಂದ ಅವರ ಆರೈಕೆ ಮಾಡಲು ಸಾಧ್ಯವಿಲ್ಲದೇ ಇರಬಹುದು ಎಂದು ಕುಟುಂಬ ಅಂದುಕೊಂಡಿತ್ತು. ಕೊನೆಗೆ ಪರೀಕ್ಷೆ ನಡೆಸಿ ಪಾಸಿಟಿವ್ ಬಂದಿದ್ದರೂ ಕುಟುಂಬ ಅದನ್ನು ಗ್ರಾಮಸ್ಥರಿಗ್ಯಾರಿಗೂ ಹೇಳದೆ ಗುಟ್ಟಾಗಿಟ್ಟಿತ್ತು. ಅಷ್ಟೇ ಅಲ್ಲದೆ ಆಕೆಯನ್ನು ಆಸ್ಪತ್ರೆಗೂ ಸೇರಿಸಿರಲಿಲ್ಲ ಎನ್ನಲಾಗಿದೆ.
ಮೇ 21ರಂದು ಆಕೆಯ ಅಂತ್ಯಸಂಸ್ಕಾರ ನಡೆದಿತ್ತು. ಆಗ ಸುಮಾರು 12 ಜನರು ಭಾಗವಹಿಸಿದ್ದರು. ಕೋವಿಡ್ ಪೂರ್ವ ಸಮಯದಲ್ಲೂ ಅಂತ್ಯಕ್ರಿಯೆಗಳಿಗೆ ಇಷ್ಟೇ ಸಂಖ್ಯೆಯ ಜನರು ಭಾಗವಹಿಸುತ್ತಿದ್ದರೆಂದು ಅಲ್ಲಿನ ಜನರು ಹೇಳುತ್ತಾರೆ. ಆದರೆ ಈ ಕೋವಿಡ್ ಸಾಂಕ್ರಾಮಿಕದ ಸಂದರ್ಭವೂ 13ನೇ ದಿನದ ಶ್ರಾದ್ಧದೂಟಕ್ಕೆ ಮಾತ್ರ 600ರಷ್ಟು ಜನ ಭಾಗವಹಿಸಿದ್ದರು. ಕುಟುಂಬ ಮಹಿಳೆಯ ಚಿಕಿತ್ಸೆಗೆ ರೂ. 12,000 ಖರ್ಚು ಮಾಡಿದ್ದರೆ ಭೋಜ್ ಅಥವಾ ಶ್ರಾದ್ಧದೂಟಕ್ಕೆ ಸುಮಾರು 2 ಲಕ್ಷ ಖರ್ಚು ಮಾಡಿದೆ ಎಂದು ವರದಿಯಾಗಿದೆ.