44 ಕೋಟಿ ಡೋಸ್ ಕೋವಿಡ್ ಲಸಿಕೆಗೆ ಕೇಂದ್ರದಿಂದ ಬೇಡಿಕೆ ಸಲ್ಲಿಕೆ

ಹೊಸದಿಲ್ಲಿ,ಜೂ.8: ಹಲವಾರು ರಾಜ್ಯಗಳಲ್ಲಿ ಲಸಿಕೆ ನೀಡಿಕೆ ಕೇಂದ್ರಗಳ ಮುಚ್ಚುಗಡೆಗೆ ಕಾರಣವಾಗಿರುವ ಕೊರತೆಯ ನಡುವೆಯೇ ಕೇಂದ್ರ ಸರಕಾರವು 44 ಕೋಟಿ ಡೋಸ್ ಕೋವಿಡ್ ಲಸಿಕೆಗಾಗಿ ಬೇಡಿಕೆ ಸಲ್ಲಿಸಿದೆ. ಈ ಲಸಿಕೆಗಳು ಹಾಲಿ ವರ್ಷದ ಆಗಸ್ಟ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ಪೂರೈಕೆಯಾಗಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ.
ಲಸಿಕೆ ನೀಡಿಕೆಯ ಸಾರ್ವತ್ರೀಕರಣವನ್ನು ಸಾಧಿಸಲು 25 ಕೋಟಿ ಡೋಸ್ ಕೋವಿಶೀಲ್ಡ್ ಮತ್ತು 19 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಸಚಿವಾಲಯವು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನೂತನ ಲಸಿಕೆ ನೀತಿಯನ್ನು ಪ್ರಕಟಿಸಿ, ದೇಶದಲ್ಲಿಯ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ನೀಡಲಾಗುವುದು ಎಂದು ತಿಳಿಸಿದ್ದರು.
ನೂತನ ನೀತಿಯಡಿ ಸುಮಾರು 50,000 ಕೋ.ರೂ.ವೆಚ್ಚವಾಗಲಿದ್ದು, ಕೇಂದ್ರದ ಬಳಿ ಅಗತ್ಯ ಹಣಕಾಸು ಇದೆ ಎಂದು ವಿತ್ತ ಸಚಿವಾಲಯವು ಮಂಗಳವಾರ ತಿಳಿಸಿದೆ.
ಕ್ಲಿನಿಕಲ್ ಟ್ರಯಲ್ಗೊಳಗಾಗಿರುವ ಹೈದರಾಬಾದಿನ ಬಯಾಲಜಿಕಲ್ ಇ ಕಂಪನಿಯ ಕೋವಿಡ್ ಲಸಿಕೆಯ 30 ಕೋಟಿ ಡೋಸ್ ಗಳಿಗಾಗಿ ತಾನು ಮುಂಗಡ ಬೇಡಿಕೆಯನ್ನು ಸಲ್ಲಿಸಿರುವುದಾಗಿ ಕೇಂದ್ರ ಸರಕಾರವು ಕಳೆದ ವಾರ ತಿಳಿಸಿತ್ತು.