ಭ್ರಷ್ಟಾಚಾರ ಸಹಿಸದೇ ಇರುವುದಕ್ಕೆ ಆಗಾಗ ವರ್ಗಾವಣೆ ಮಾಡಲಾಗುತ್ತಿದೆ ಎಂದು ಚಾಟ್ ಮಾಡಿದ್ದ ಐಎಎಸ್ ಅಧಿಕಾರಿಗೆ ನೋಟಿಸ್

photo: twitter
ಭೋಪಾಲ್: ಐಎಎಸ್ ಅಧಿಕಾರಿಗಳ ಖಾಸಗಿ ಸೋಷಿಯಲ್ ಮೀಡಿಯಾ ಗುಂಪಿನಲ್ಲಿ ರಾಜ್ಯದ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರಿಗೆ ಸರಕಾರವು ಶೋಕಾಸ್ ನೋಟಿಸ್ ಕಳುಹಿಸಿದೆ. ಐಎಎಸ್ ಅಧಿಕಾರಿ ಭ್ರಷ್ಟಾಚಾರದ ಕುರಿತಾಗಿ ಮಾಡಿದ್ದ ಚಾಟ್ ಸೋರಿಕೆಯಾಗಿತ್ತು.
ಲೋಕೇಶ್ ಜಂಗಿದ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತವರು ರಾಜ್ಯ ಮಹಾರಾಷ್ಟ್ರಕ್ಕೆ ಮೂರು ವರ್ಷಗಳ ಡೆಪ್ಯುಟೇಶನ್ ಕೋರಿದ್ದರು. ಆದರೆ ಸೋರಿಕೆಯಾದ ಪೋಸ್ಟ್ ಗಳಲ್ಲಿ, ತಾನು ಭ್ರಷ್ಟಾಚಾರವನ್ನು ಸಹಿಸದೆ ಇರುವುದಕ್ಕೆ ತನ್ನನ್ನು ಪದೇ ಪದೇ ವರ್ಗಾವಣೆ ಮಾಡಲಾಗುತ್ತಿದೆ. ನಾಲ್ಕೂವರೆ ವರ್ಷಗಳಲ್ಲಿ, ಒಂಬತ್ತು ಬಾರಿ ವರ್ಗಾವಣೆಯಾಗಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯ ಸರಕಾರವು ಅಧಿಕಾರಿಗೆ "ಅಶಿಸ್ತಿ" ಗಾಗಿ ಶೋಕಾಸ್ ನೋಟಿಸ್ ನೀಡಿತು ಹಾಗೂ ಒಂದು ವಾರದೊಳಗೆ ಉತ್ತರವನ್ನು ಕೋರಿತು. ನೋಟಿಸ್ ಅನ್ನು ದೃ ಢಪಡಿಸಿದ ಕ್ಯಾಬಿನೆಟ್ ಸಚಿವ ವಿಶ್ವಾಸ್ ಸಾರಂಗ್ ಅವರು ವರ್ಗಾವಣೆ ಹಾಗೂ ಪೋಸ್ಟಿಂಗ್ ಗಳು ವಾಡಿಕೆಯ ಆಡಳಿತಾತ್ಮಕ ಕಾರ್ಯವಿಧಾನವಾಗಿದೆ ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ಕಾರಣ ಜಂಗಿದ್ ಅವರನ್ನು ಬರ್ವಾನಿಯಿಂದ ವರ್ಗಾಯಿಸಲಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
2014ರ ಬ್ಯಾಚಿನ್ ಐಎಎಸ್ ಅಧಿಕಾರಿ ಮೇ 31ರಂದು ಬರ್ವಾನಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಯಿಂದ ಭೋಪಾಲ್ ನಲ್ಲಿರುವ ರಾಜ್ಯ ಶಿಕ್ಷಾ ಕೇಂದ್ರಕ್ಕೆ ಹೆಚ್ಚುವರಿ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿತ್ತು. ಬರ್ವಾಣಿ ಜಿಲ್ಲಾಧಿಕಾರಿಯನ್ನಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮುದಾಯಕ್ಕೆ ಸೇರಿರುವ ಶಿವರಾಜ್ ಸಿಂಗ್ ರನ್ನು ನಿಯೋಜಿಸಲಾಗಿತ್ತು.