ಭ್ರಷ್ಟಾಚಾರ ಆರೋಪ ಮಾಡಿದ್ದ ಐಎಎಸ್ ಅಧಿಕಾರಿಗೇ ಜೀವ ಬೆದರಿಕೆ

ಲೋಕೇಶ್ ಕುಮಾರ್ ಜಂಗೀದ್
ಭೋಪಾಲ್, ಜೂ.19: ಖಾಸಗಿ ಮೆಸೇಜಿಂಗ್ ಆ್ಯಪ್ನಲ್ಲಿ ಮಧ್ಯಪ್ರದೇಶದ ಉನ್ನತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಯುವ ಐಎಎಸ್ ಅಧಿಕಾರಿ ಲೋಕೇಶ್ ಕುಮಾರ್ ಜಂಗೀದ್ಗೆ ಜೀವಬೆದರಿಕೆ ಬಂದಿರುವುದಾಗಿ ದೂರಲಾಗಿದೆ.
ಜೀವ ಬೆದರಿಕೆ ಹಿನ್ನೆಲೆಯಲ್ಲಿ 2014ನೇ ಬ್ಯಾಚ್ ಐಎಎಸ್ ಅಧಿಕಾರಿ ಪೊಲೀಸ್ ರಕ್ಷಣೆ ಕೋರಿದ್ದಾರೆ. ಸಿಗ್ನಲ್ ಎಂಬ ಖಾಸಗಿ ಮೆಸೇಜಿಂಗ್ ಆ್ಯಪ್ನ ಐಎಎಸ್ ಅಧಿಕಾರಿಗಳ ಗುಂಪಿನಲ್ಲಿ ಜಂಗೀದ್ ಮಾಡಿದ್ದ ಆರೋಪ ಸೋರಿಕೆಯಾಗಿತ್ತು. ಈ ಕಾರಣಕ್ಕೆ ರಾಜ್ಯ ಸರ್ಕಾರ ಈಗಾಗಲೇ ಅವರಿಗೆ ನೋಟಿಸ್ ನೀಡಿದೆ.
ಗುರುವಾರ ರಾತ್ರಿ 11:50ಕ್ಕೆ ಸಿಗ್ನಲ್ ಆ್ಯಪ್ನಲ್ಲಿ ಕರೆ ಮಾಡಿರುವ ಅಪರಿಚಿತ ವ್ಯಕ್ತಿಯೊಬ್ಬ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಮಧ್ಯಪ್ರದೇಶ ಡಿಜಿಪಿ ವಿವೇಕ್ ಜೋಹ್ರಿಯವರಿಗೆ ಬರೆದ ಪತ್ರದಲ್ಲಿ ಜಂಗೀದ್ ವಿವರಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ್ದಕ್ಕೆ ಬೆದರಿಕೆ ಹಾಕಿರುವ ಆಗಂತುಕ, "ನಿಮ್ಮ ಹಾಗೂ ಮಗನ ಜೀವದ ಬಗ್ಗೆ ಆಸೆ ಇದ್ದರೆ ಆರು ತಿಂಗಳು ರಜೆಯಲ್ಲಿ ತೆರಳಬೇಕು" ಎಂದೂ ಒತ್ತಾಯಪಡಿಸಿದ್ದಾನೆ ಎಂದು ಹೇಳಿದ್ದಾರೆ. ಮಾಧ್ಯಮಗಳ ಜತೆ ಮಾತನಾಡುವುದು ನಿಲ್ಲಿಸದಿದ್ದರೆ ನಿಮಗೆ ಹಾಗೂ ಕುಟುಂಬಕ್ಕೆ ಅಪಾಯವಿದೆ ಎಂದು ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.