ಕೊರೋನ ಸಾಂಕ್ರಾಮಿಕದ ಕಾರಣದಿಂದ ಮಾದಕ ವಸ್ತು ಬಳಕೆ ಹೆಚ್ಚಳವಾಗಿದೆ: ವಿಶ್ವಸಂಸ್ಥೆ ವರದಿ

ವಿಶ್ವಸಂಸ್ಥೆ, ಜೂ.24: ಕೊರೋನ ಸಾಂಕ್ರಾಮಿಕ ರೋಗದಿಂದ ಹಲವು ಜನ ಮಾದಕವಸ್ತು ಸೇವನೆಯ ಚಟಕ್ಕೆ ಒಳಗಾಗಿದ್ದಾರೆ. ಕೊರೋನ ಸೋಂಕಿನಿಂದ ಮಾದಕ ವಸ್ತುಗಳ ಉತ್ಪಾದನೆಗೆ ಉತ್ತೇಜನ ದೊರಕುವುದರ ಜತೆಗೆ, ಮುಂದಿನ ಹಲವು ವರ್ಷಗಳ ವರೆಗೆ ಇದರ ಪರಿಣಾಮ ಗೋಚರಿಸಲಿದೆ ಎಂದು ವಿಶ್ವಸಂಸ್ಥೆ ಗುರುವಾರ ಎಚ್ಚರಿಸಿದೆ.
ಕೊರೋನ ಸೋಂಕಿನಿಂದ ನಿರುದ್ಯೋಗ ಮತ್ತಿತರ ಸಮಸ್ಯೆಗಳು ಜಾಗತಿಕವಾಗಿ ಹೆಚ್ಚಿರುವುದರಿಂದ ಅಫೀಮು, ಗಾಂಜಾ ಬೆಳೆಗಳ ಅಕ್ರಮ ಉತ್ಪಾದನೆಯೂ ಹೆಚ್ಚಬಹುದು ಎಂದು ವಿಶ್ವಸಂಸ್ಥೆಯ ಮಾದಕವಸ್ತು ಮತ್ತು ಅಪರಾಧ ವಿಭಾಗ(ಯುಎನ್ಒಡಿಸಿ)ದ ವರದಿ ಹೇಳಿದೆ. ವಿಶ್ವದಾದ್ಯಂತದ ಸದಸ್ಯರಾಷ್ಟ್ರಗಳಿಂದ ಈ ಸಂಸ್ಥೆ ಅಂಕಿಅಂಶ ಸಂಗ್ರಹಿಸುತ್ತದೆ. ಕಳೆದ ವರ್ಷ ಕೊರೋನ ಸೋಂಕಿನ ಸಮಸ್ಯೆ ಆರಂಭವಾದಾಗ, ಕೆಲ ದಿನ ಮಾದಕವಸ್ತು ಸರಬರಾಜು ಜಾಲ ಅಸ್ತವ್ಯಸ್ತವಾಗಿದ್ದರೂ ಬಳಿಕ ತ್ವರಿತವಾಗಿ ಚೇತರಿಸಿಕೊಂಡಿದೆ.
ಅತ್ಯಂತ ಹೆಚ್ಚು ಅಪೀಮು ಉತ್ಪಾದಿಸುವ ದೇಶವಾದ ಅಪಘಾನಿಸ್ತಾನದಲ್ಲಿ, 2019ಕ್ಕೆ ಹೋಲಿಸಿದರೆ 2020ರಲ್ಲಿ ಅಪೀಮು ಬೆಳೆಗೆ ಬಳಸಿದ ಜಮೀನಿನ ಪ್ರಮಾಣ 37% ಹೆಚ್ಚಿದೆ. ಜನರನ್ನು ಮಾದಕವಸ್ತುವಿನೆಡೆ ಆಕರ್ಷಿಸುವ ಅಸಮಾನತೆ, ಬಡತನ ಮತ್ತು ಮಾನಸಿಕ ಆರೋಗ್ಯಸ್ಥಿತಿಯ ಸಮಸ್ಯೆಯೂ ಈ ಅವಧಿಯಲ್ಲಿ ಹೆಚ್ಚಿದೆ ಎಂದು ವರದಿ ಹೇಳಿದೆ. ಗಾಂಜ ಅಥವಾ ಬಂಗಿಯ ಬಳಕೆ ಕೊರೋನ ಸೋಂಕಿನ ಸಂದರ್ಭ ತೀವ್ರಪ್ರಮಾಣದಲ್ಲಿ ಹೆಚ್ಚಿದೆ. ಇದರ ಬಳಕೆಯಿಂದ ಹೆಚ್ಚಿನ ಅಪಾಯವಿಲ್ಲ ಎಂದು ಜನತೆ ಭಾವಿಸಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೆ ಕೆಲವೊಂದು ಔಷಧಗಳ(ಉದಾಹರಣೆ ಕೆಮ್ಮಿನ ಸಿರಪ್)ನ್ನು ವೈದ್ಯಕೀಯೇತರ ಕಾರಣಕ್ಕೆ ಬಳಸುವ ಪ್ರಮಾಣವೂ ಸೋಂಕಿನ ಸಂದರ್ಭ ಹೆಚ್ಚಿದೆ.
ಮಾದಕವಸ್ತುಗಳ ಅಕ್ರಮ ಸಾಗಾಟವೂ ಹೆಚ್ಚಿದೆ ಎಂದು ವರದಿ ಹೇಳಿದೆ. 2014ರಿಂದ 2019ರ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಕೊಕೇನ್ನ ಉತ್ಪಾದನೆ ದ್ವಿಗುಣಗೊಂಡಿತ್ತು. ಜಾಗತಿಕ ಜನಸಂಖ್ಯೆಯ ಪ್ರಮಾಣ ಹೆಚ್ಚುತ್ತಿರುವಂತೆಯೇ ಕೊಕೇನ್ ಬಳಕೆಯ ಪ್ರಮಾಣವೂ ಹೆಚ್ಚಿದೆ. ಯುರೋಪ್ಗೆ ಕೊಕೇನ್ ಸರಬರಾಜು ಮಾಡುವ ಜಾಲವು, ಬೆಲೆ ಇಳಿಕೆ ಮಾಡಿ ಗುಣಮಟ್ಟ ವರ್ಧಿಸುವ ಮೂಲಕ ಯುರೋಪ್ನಲ್ಲಿ ಕೊಕೇನ್ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ಬೆದರಿಕೆ ಒಡ್ಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.