ಅಫ್ಘಾನ್ ಸಂಘರ್ಷ: ವರ್ಚುವಲ್ ಜಿ-7 ಶೃಂಗಕ್ಕೆ ಮುಂದಾದ ಅಮೆರಿಕ, ಬ್ರಿಟನ್

ಜೋ ಬೈಡೆನ್ ಹಾಗೂ ಬೋರಿಸ್ ಜಾನ್ಸನ್ (Photo credit: PTI)
ವಾಷಿಂಗ್ಟನ್, ಆ.18: ಅಫ್ಘಾನಿಸ್ತಾನದಲ್ಲಿ ಉದ್ಭವಿಸಿರುವ ಪರಿಸ್ಥಿತಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಮಂಗಳವಾರ ಚರ್ಚಿಸಿದರು. ಪರಿಸ್ಥಿತಿಯ ಬಗ್ಗೆ ವಿಸ್ತೃತ ಚರ್ಚೆಗೆ ಜಿ-7 ದೇಶಗಳ ನಾಯಕರ ವರ್ಚುವಲ್ ಶೃಂಗಸಭೆ ನಡೆಸಲಾಗುವುದು ಎಂದು ಶ್ವೇತಭವನ ಪ್ರಕಟಿಸಿದೆ.
"ಸಮಾನ ಕಾರ್ಯತಂತ್ರ ಮತ್ತು ದೃಷ್ಟಿಕೋನದ ಬಗ್ಗೆ ಚರ್ಚಿಸಲು ಮುಂದಿನ ವಾರ ಜಿ-7 ಮುಖಂಡರ ಸಭೆ ನಡೆಸಲು ಅವರು ಒಪ್ಪಿಕೊಂಡಿದ್ದಾರೆ" ಎಂದು ಶ್ವೇತಭವನ ಹೇಳಿಕೆ ನೀಡಿದೆ.
ತಾಲಿಬಾನ್ ರವಿವಾರ ಕಾಬೂಲ್ ನಗರವನ್ನು ವಶಪಡಿಸಿಕೊಂಡ ಮೇಲೆ ಬೈಡೆನ್ ವಿದೇಶಿ ಮುಖಂಡರ ಜತೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದು ಇದೇ ಮೊದಲು. ಇದಕ್ಕೂ ಮುನ್ನ ಅಮೆರಿಕ ಹಾಗೂ ಮಿತ್ರ ಪಡೆಯ ಯೋಧರನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ತುರ್ತಾರಿ ವಾಪಸ್ ಕರೆ ತರಲಾಗಿತ್ತು.
ದಿಢೀರ್ ತಾಲಿಬಾನ್ ವಿಜಯದಿಂದ ದೊಡ್ಡ ಪ್ರಮಾಣದ ಮಾನವೀಯ ಸಮಸ್ಯೆ ಸೃಷ್ಟಿಯಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ನಿರಾಶ್ರಿತರು ಪಶ್ಚಿಮ ಯೂರೋಪ್ ಸೇರಿದಂತೆ ವಿದೇಶಗಳಲ್ಲಿ ಆಶ್ರಯ ಪಡೆಯಲು ಮುಂದಾಗಬಹುದು ಎಂದು ಅಂದಾಜಿಸಲಾಗಿದೆ.
ಮಿತ್ರಪಡೆಗಳ ನಡುವೆ ಮತ್ತು ಪ್ರಜಾಸತ್ತಾತ್ಮಕ ಪಾಲುದಾರರ ನಡುವೆ ನಿಕಟವಾದ ಸಮನ್ವಯವನ್ನು ಏರ್ಪಡಿಸುವ ಅಗತ್ಯತೆಯನ್ನು ಬೈಡೆನ್ ಹಾಗೂ ಜಾನ್ಸನ್ ಒತ್ತಿ ಹೇಳಿದರು ಎಂದು ಪ್ರಕಟನೆಯಲ್ಲಿ ವಿವರಿಸಲಾಗಿದೆ. ಅಫ್ಘಾನಿಸ್ತಾನದಲ್ಲಿ ಸಂತ್ರಸ್ತರಾದವರಿಗೆ ಮಾನವೀಯ ನೆರವು ಮತ್ತು ಬೆಂಬಲವನ್ನು ಒದಗಿಸುವುದೂ ಇದರಲ್ಲಿ ಸೇರಿದೆ ಎಂದು ಪ್ರಕಟನೆ ಹೇಳಿದೆ.