ಕಾಬೂಲ್ ಆತ್ಮಹತ್ಯಾ ದಾಳಿ: 100 ದಾಟಿದ ಸಾವಿನ ಸಂಖ್ಯೆ
ತೆರವು ಕಾರ್ಯಾಚರಣೆ ಪುನಾರಂಭ; ವಿಮಾನನಿಲ್ದಾಣದಲ್ಲಿ ಮತ್ತೆ ಜಮಾಯಿಸತೊಡಗಿದ ಜನತೆ

ಕಾಬೂಲ್, ಆ.27: ಕಾಬೂಲ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಹೊರಭಾಗದ ಗೇಟ್ ಬಳಿ ಗುರುವಾರ ನಡೆದ ಅವಳಿ ಆತ್ಮಾಹತ್ಯಾ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ 100ನ್ನು ದಾಟಿದೆ ಎಂದು ಮೂಲಗಳು ತಿಳಿಸಿವೆ. ಮೃತರಲ್ಲಿ ಕನಿಷ್ಠ 13 ಮಂದಿ ಅಮೆರಿಕ ಯೋಧರು ಹಾಗೂ 28 ಮಂದಿ ತಾಲಿಬಾನ್ ಸದಸ್ಯರು ಕೂಡಾ ಸೇರಿದ್ದಾರೆಂದು ತಿಳಿದುಬಂದಿದೆ.
ಈ ಮಧ್ಯೆ ಅಫ್ಘಾನ್ ತೊರೆಯಲು ಬಯಸುತ್ತಿರುವ ಅಫ್ಘನ್ನರು ಹಾಗೂ ಅಮೆರಿಕದ ಸೇನಾ ಸಿಬ್ಬಂದಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಶುಕ್ರವಾರ ಪುನಾರಂಭಗೊಂಡಿದೆ.
ಗುರುವಾರ ದಾಳಿಯ ಹೊಣೆಯನ್ನು ಐಸಿಸ್ ಭಯೋತ್ಪಾದಕ ಗುಂಪು ವಹಿಸಿಕೊಂಡಿದ್ದು ಅಮೆರಿಕನ್ ಸೇನೆಯ ಭಾಷಾಂತರಕಾರರು ಹಾಗೂ ಸಹಕಾರಿಗಳನ್ನು ಗುರಿಯಿರಿಸಿ ದಾಳಿ ನಡೆಸಿರುವುದಾಗಿ ಹೇಳಿದೆ. ಸ್ಫೋಟದಲ್ಲಿ 169ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆಂದು ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಆತ್ಮಹತ್ಯಾ ಬಾಂಬರ್ಗಳು ತಮ್ಮನ್ನು ಸ್ಫೋಟಿಸಿಕೊಂಡಿದ್ದಾರೆಯೇ ಅಥವಾ ಇರಿಸಲಾದ ಬಾಂಬ್ ಸ್ಪೋಟಗೊಂಡಿತ್ತೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಸ್ಫೋಟದ ಬಳಿಕ ಐಸಿಸ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆಯೇ ಅಥವಾ ಜನರನ್ನು ನಿಯಂತ್ರಿಸಲು ತಾಲಿಬಾನ್ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆಯೇ ಎಂಬುದು ಕೂಡಾ ಖಚಿತವಾಗಿಲ್ಲ ಎಂದು ವರದಿಯಾಗಿದೆ.
ಮುಂದಿನ ದಿನಗಳಲ್ಲಿ ಐಸಿಸ್ ಉಗ್ರರು ರಾಕೆಟ್ಗಳು ಹಾಗೂ ಕಾರ್ಬಾಂಬ್ಗಳ ಮೂಲಕ ವಿಮಾನನಿಲ್ದಾಣವನ್ನು ಗುರಿಯಿರಿಸಿ ದಾಳಿ ಮಾಡುವ ಸಾಧ್ಯತೆಯಿದೆಯೆಂದು ಅಮೆರಿಕದ ಸೆಂಟ್ರಲ್ ಕಮಾಂಡ್ನ ವರಿಷ್ಠ ಜನರಲ್ ಫ್ರಾಂಕ್ ಮ್ಯಾಕೆಂಝಿ ತಿಳಿಸಿದ್ದಾರೆ.
ಐಸಿಸ್ ಉಗ್ರರ ದಾಳಿ ಸಾಧ್ಯತೆಯ ಬಗ್ಗೆ ತಾಲಿಬಾನ್ ಜೊತೆ ಬೇಹುಗಾರಿಕಾ ಮಾಹಿತಿಯನ್ನು ಅಮೆರಿಕ ಹಂಚಿಕೊಂಡಿದ್ದು, ಕೆಲವು ಸಂಭಾವ್ಯ ದಾಳಿಗಳನ್ನು ತಾಲಿಬಾನ್ ವಿಫಲಗೊಳಿಸಿದೆ ಎಂದವರು ತಿಳಿಸಿದರು.
ಅಧ್ಯಕ್ಷ ಜೋ ಬೈಡೆನ್ ನಿಗದಿಪಡಿಸಿರುವ ಗಡುವಿನ ಪ್ರಕಾರ ಆಗಸ್ಟ್ 3ರೊಳಗೆ ಅಮೆರಿಕ ಪಡೆಗಳು ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಿವೆ. ಕಾಬೂಲ್ ವಿಮಾನನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಶಾಮೀಲಾಗಿದೆಯೆಂದು ಶಂಕಿಸಲಾಗಿರುವ ಐಸಿಸ್-ಕೆ ಮೇಲೆ ದಾಳಿ ನಡೆಸುವ ಬಗ್ಗೆ ಯೋಜನೆಯೊಂದನ್ನು ರೂಪಿಸುವಂತೆ ತಾನು ಅಮೆರಿಕದ ರಕ್ಷಣಾ ಕಾರ್ಯಾಲಯ ಪೆಂಟಾಗನ್ ಆದೇಶ ನೀಡಿರುವುದಾಗಿ ಬೈಡೆನ್ ತಿಳಿಸಿದ್ದಾರೆ.
‘‘ನಾವು ಕ್ಷಮಿಸಲಾರೆವು.ನಾವು ಮರೆಯಲಾರೆವು.ನಾವು ನಿಮ್ಮನ್ನು ಬೇಟೆಯಾಡುತ್ತೇವೆ ಹಾಗೂ ನೀವು ಬೆಲೆತೆರುವಂತೆ ಮಾಡುತ್ತೇವೆ’’ ಎಂದು ಬೈಡೆನ್ ಶ್ವೇತಭವನದಿಂದ ಟಿವಿ ಮೂಲಕ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಚರಂಡಿಯಲ್ಲಿ ತೇಲುತ್ತಿರುವ ಹೆಣಗಳು:
ವಿಮಾನನಿಲ್ದಾಣದ ಬೇಲಿಯ ಸಮೀಪದಲ್ಲಿರುವ ತ್ಯಾಜ್ಯ ನೀರಿನ ಕಾಲುವೆಯಲ್ಲಿ ತೇಲುತ್ತಿರುವ ಶವಗಳನ್ನು ಹೊರಗೆಳೆಯುತ್ತಿರುವುದನ್ನು ಹಾಗೂ ಅವುಗಳನ್ನು ಪಕ್ಕದಲ್ಲಿ ರಾಶಿರಾಶಿಯಾಗಿ ಪೇರಿಸಿಟ್ಟಿರುವ ಭೀಕರ ದೃಶ್ಯಗಳು ವಿಡಿಯೋದಲ್ಲಿ ಕಂಡುಬಂದಿವೆ. ಶೋಕತಪ್ತ ನಾಗರಿಕರು ತಮ್ಮ ಬಂಧುಗಳ ಮೃತದೇಹಗಳಿಗಾಗಿ ಅರಸುತ್ತಿರುವುದನ್ನು ಕೂಡಾ ವಿಡಿಯೋ ತೋರಿಸಿದೆ.
ಶುಕ್ರವಾರವೂ ಸಾವಿರಾರು ಅಫ್ಘಾನ್ ನಾಗರಿಕರು ವಿಮಾನನಿಲ್ದಾಣದ ಬೇಲಿಯ ಬಳಿ ಮರಳಿ ಜಮಾಯಿಸಿದ್ದರೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ವಿಡಿಯೋವೊಂದು ತೋರಿಸಿದೆ.
ಅಫ್ಘಾನಿಸ್ತಾನದಿಂದ ತೆರವು ಕಾರ್ಯಾಚರಣೆಯನ್ನು ಶುಕ್ರವಾರ ಕೊನೆಗೊಳಿಸುವುದಾಗಿ ಬ್ರಿಟಿಶ್ ಸರಕಾರ ತಿಳಿಸಿರುವುದಾಗಿ ಡೇಲಿ ಮೇಲ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ ಬ್ರಿಟಿಶ್ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೆಸ್ ಹೇಳಿಕೆಯನ್ನು ನೀಡಿ ಪಾಶ್ಚಿಮಾತ್ಯ ಪಡೆಗಳು ಬೃಹತ್ ಏರ್ಲಿಫ್ಟ್ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ಸನಿಹಕ್ಕೆ ಬರುತ್ತಿರುವಂತೆಯೇ ಉಗ್ರರಿಂದ ದಾಳಿ ಬೆದರಿಕೆಗಳು ಹೆಚ್ಚಾಗಿವೆಯೆಂದು ತಿಳಿಸಿದ್ದಾರೆ.
ದಾಳಿಯಲ್ಲಿ 18 ಮಂದಿ ಅಮೆರಿಕನ್ ಯೋಧರಿಗೆ ಗಾಯಗಳಾಗಿವೆಯೆಂದು ಅಮೆರಿಕದ ಸೆಂಟ್ರಲ್ ಕಮಾಂಡ್ನ ವಕ್ತಾರರು ತಿಳಿಸಿದ್ದಾರೆ.
ಗುರುವಾರ ಆತ್ಮಹತ್ಯಾ ದಾಳಿಯಲ್ಲಿ ಅಮೆರಿಕನ್ ಯೋಧರಿಗಿಂತಲೂ ಅಧಿಕ ಸಂಖ್ಯೆಯಲ್ಲಿ ತನ್ನ ಸದಸ್ಯರು ಮೃತಪಟ್ಟಿದ್ದಾರೆಂದು ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ಅವಳಿ ದಾಳಿಗಳಲ್ಲಿ ಯಾವುದೇ ತಾಲಿಬಾನ್ ಸದಸ್ಯ ಸಾವನ್ನಪ್ಪಿಲ್ಲವೆಂದು ತಾಲಿಬಾನ್ ವಕ್ತಾರ ಝಭಿಹುಲ್ಲಾ ಮುಜಾಹೀದ್ ತಿಳಿಸಿದ್ದಾರೆ.