ನೀರಿನ ಸಮಸ್ಯೆ ಪ್ರಶ್ನಿಸಿದ ವ್ಯಕ್ತಿಗೆ ಥಳಿಸಿದ ಪಂಚಾಯತ್ ಅಧ್ಯಕ್ಷ!

ಹೈದರಾಬಾದ್, ಸೆ.24: ನೀರಿನ ಸಮಸ್ಯೆಯ ಬಗ್ಗೆ ಪ್ರಶ್ನಿಸಿದ ನಾಗರಿಕರೊಬ್ಬರನ್ನು ಪಂಚಾಯತ್ ಅಧ್ಯಕ್ಷ (ಸರಪಂಚ) ಕಾಲಿನಿಂದ ಒದ್ದ ಘಟನೆಗೆ ಸಂಬಂಧಿಸಿದಂತೆ ಸರಪಂಚನನ್ನು ವಿಕಾರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮಾರ್ಪಲ್ಲಿ ಮಂಡಲದ ದಮಸ್ತಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರಪಂಚ ಜೈಪಾಲ್ರೆಡ್ಡಿ ಮಂಡಲದ ವ್ಯಾಜ್ಯಗಳನ್ನು ವಿಲೇವಾರಿ ಮಾಡುತ್ತಿದ್ದ ವೇಳೆ ಸ್ಥಳೀಯರಾದ ಪಿಟ್ಟಲ ಶ್ರೀನಿವಾಸ ಎಂಬುವವರು ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಕುಡಿಯುವ ನೀರಿನ ಯೋಜನೆ ಮತ್ತು ನೈರ್ಮಲ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ಈ ಸಮಸ್ಯೆ ಬಗೆಹರಿಸುವಂತೆ ರೆಡ್ಡಿಗೆ ಮನವಿ ಮಡಿದರು. ಇದರಿಂದ ಕೋಪಗೊಂಡ ರೆಡ್ಡಿ, ಶ್ರೀನಿವಾಸನ ಕಡೆಗೆ ಧಾವಿಸಿ ಬಂದು ಪದೇ ಪದೇ ಕಾಲಿನಿಂದ ಒದ್ದಿದ್ದಾನೆ. ನೆಲದ ಮೇಲೆ ಬಿದ್ದ ವ್ಯಕ್ತಿಯ ಬೆನ್ನ ಮೇಲೆ ಗುದ್ದುತ್ತಿದ್ದಾಗ ಮತ್ತೊಬ್ಬ ಗ್ರಾಮಸ್ಥ ಶ್ರೀನಿವಾಸನ ನೆರವಿಗೆ ಧಾವಿಸಿ ರೆಡ್ಡಿಯನ್ನು ತಡೆದಿದ್ದಾರೆ.
ಶ್ರೀನಿವಾಸ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೆಡ್ಡಿಯನ್ನು ಬಂಧಿಸಿದರು. ಅರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.