ಬಿಜೆಪಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿಯಿಂದ ನಮ್ಮ ಘನತೆಗೆ ಅವಮಾನ: ಗುರ್ಜರ್ ನಾಯಕರ ವಿಷಾದ
ಮಿಹಿರ ಭೋಜ ಪ್ರತಿಮೆ ವಿವಾದ

photo: outlookindia.com
ಲಕ್ನೋ,ಅ.2: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಬಿಜೆಪಿ ನಾಯಕರ ಸೂಚನೆಯ ಮೇರೆಗೆ ಮಿಹಿರ ಭೋಜ ಚಕ್ರವರ್ತಿಯ ಪ್ರತಿಮೆಯ ನಾಮಫಲಕದಿಂದ ‘ಗುರ್ಜರ್ ’ಶಬ್ದವನ್ನು ತೆಗೆಯಲಾಗಿದೆ ಎಂದು ಗುರ್ಜರ್ ನಾಯಕರು ಆರೋಪಿಸುವುದರೊಂದಿಗೆ ಈ ಕುರಿತ ವಿವಾದವು ತೀವ್ರಗೊಳ್ಳುತ್ತಿದೆ. ರಜಪೂತ ಸಮುದಾಯದ ಒತ್ತಡಕ್ಕೆ ಮಣಿದು ಆದಿತ್ಯನಾಥ್ ಈ ಕ್ರಮವನ್ನು ಕೈಗೊಂಡಿದ್ದಾರೆ ಎಂದು ಈ ನಾಯಕರು ಆರೋಪಿಸಿದ್ದಾರೆ.
ಸೆ.22ರಂದು ಗ್ರೇಟರ್ ನೊಯ್ಡದ ದಾದ್ರಿಗೆ ಭೇಟಿ ನೀಡಿದ್ದ ಆದಿತ್ಯನಾಥ ಅವರು ಗುರ್ಜರ್ ಸಮುದಾಯವು ನಡೆಸುತ್ತಿರುವ ಕಾಲೇಜಿನಲ್ಲಿ ಒಂಭತ್ತನೇ ಶತಮಾನದ ಚಕ್ರವರ್ತಿ ಮಿಹಿರ ಭೋಜನ ಪ್ರತಿಮೆಯೊಂದನ್ನು ಅನಾವರಣಗೊಳಿಸಿದ್ದರು. ಆದರೆ ಅವರ ಆಗಮನಕ್ಕೆ ಕೆಲವೇ ಗಂಟೆಗಳ ಮುನ್ನ ಫಲಕದಲ್ಲಿದ್ದ ‘ಗುರ್ಜರ್ ಪ್ರತಿಹಾರ ಸಾಮ್ರಾಟ ಮಿಹಿರ ಭೋಜ’ ಹೆಸರಿನಲ್ಲಿಯ ಗುರ್ಜರ್ ಶಬ್ದಕ್ಕೆ ಕಪ್ಪುಬಣ್ಣವನ್ನು ಬಳಿಯಲಾಗಿತ್ತು ಮತ್ತು ವಿವಾದವು ಸೃಷ್ಟಿಯಾಗಿತ್ತು. ಈ ಘಟನೆಯು ತಮ್ಮನ್ನು ತೀವ್ರ ನಿರಾಶರನ್ನಾಗಿಸಿದೆ ಎಂದು ಗುರ್ಜರ್ ನಾಯಕರು ಹೇಳಿದ್ದಾರೆ. ಸೆ.23ರಂದು ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಸುರೇಂದ್ರ ಸಿಂಗ್ ನಾಗರ್ ಅವರು ಪ್ರತಿಮೆಯೊಂದಿಗಿದ್ದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು ಮತ್ತು ಪ್ರತಿಮೆಯ ನಾಮಫಲಕದಲ್ಲಿ ‘ಗುರ್ಜರ್ ’ ಶಬ್ದ ಮತ್ತೊಮ್ಮೆ ಕಾಣಿಸಿಕೊಂಡಿತ್ತು.
ಆದಿತ್ಯನಾಥರ ಬಗ್ಗೆ ಕುಪಿತಗೊಂಡಿದ್ದ ಕೆಲವರು ಬಳಿಕ ನಾಮಫಲಕದಲ್ಲಿಯ ಅವರ ಹೆಸರಿಗೂ ಕಪ್ಪುಬಣ್ಣವನ್ನು ಬಳಿದಿದ್ದರು ಮತ್ತು ಇದಕ್ಕಾಗಿ ಸ್ಥಳೀಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಸೆ.22ರ ಘಟನೆಯ ಬಳಿಕ ಮುಂದಿನ ಕ್ರಮವನ್ನು ನಿರ್ಧರಿಸಲು ರಾಷ್ಟ್ರೀಯ ಗುರ್ಜರ್ ಸ್ವಾಭಿಮಾನ ಸಮಿತಿಯನ್ನು ರಚಿಸಿಕೊಂಡಿದ್ದ ವಿವಿಧ ರಾಜ್ಯಗಳ 150ಕ್ಕೂ ಅಧಿಕ ಗುರ್ಜರ್ ನಾಯಕರು ಅ.2ರಂದು ಸಭೆಯೊಂದನ್ನು ನಡೆಸಿದ್ದಾರೆ. ಮುಖ್ಯಮಂತ್ರಿಗಳು ರಜಪೂತ ಸಮುದಾಯದ ಕೈಗೊಂಬೆಯಾಗಿದ್ದಾರೆ ಎಂದು ಶನಿವಾರ ಆರೋಪಿಸಿದ ಸಮಿತಿಯ ಪದಾಧಿಕಾರಿಗಳಲ್ಲಿ ಓರ್ವರಾಗಿರುವ ಬಾಬಾ ಅಂತ್ರಾಮ್ ತನ್ವಾರ್ ಅವರು,‘ಆದಿತ್ಯನಾಥ ಅವರು ನಮ್ಮನ್ನು ಅವಮಾನಿಸುವುದಕ್ಕಿಂತ ಪ್ರತಿಮೆಯನ್ನು ಉದ್ಘಾಟಿಸಲು ನಿರಾಕರಿಸಿದ್ದರೆ ಚೆನ್ನಾಗಿರುತ್ತಿತ್ತು. ಬಿಜೆಪಿ ಮತ್ತು ಮುಖ್ಯಮಂತ್ರಿಗಳು ನಮ್ಮ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ ’ ಎಂದು ಕಿಡಿಕಾರಿದರು.
ಹೊಸದಾಗಿ ರಚಿಸಲಾಗಿರುವ ಸಮಿತಿಯು ಮುಂದಿನ ಕ್ರಿಯಾಯೋಜನೆಯನ್ನು ರೂಪಿಸಲಿದೆ. ಎಲ್ಲ ನಾಯಕರು ಏನನ್ನು ನಿರ್ಧರಿಸುತ್ತಾರೋ ಅದನ್ನು ಗುರ್ಜರ್ ಸಮುದಾಯವು ಪಾಲಿಸಲಿದೆ ಎಂದು ಅಖಿಲ ಭಾರತೀಯ ಗುರ್ಜರ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಅನುರಾಗ ಗುರ್ಜರ್ ತಿಳಿಸಿದರು.
‘ಒಂಭತ್ತನೇ ಶತಮಾನದ ಚಕ್ರವರ್ತಿ ಮಿಹಿರ ಭೋಜ ಗುರ್ಜರ್ ಸಮದಾಯದ ನಾಯಕನಾಗಿದ್ದ ಮತ್ತು ರಜಪೂತ ಸಮುದಾಯವು 13ನೇ ಶತಮಾನದ ನಂತರವೇ ಅಸ್ತಿತ್ವಕ್ಕೆ ಬಂದಿತ್ತು ಎನ್ನುವುದಕ್ಕೆ ಪ್ರತಿಯೊಂದು ಪುರಾವೆಯನ್ನು ನಾವು ಒದಗಿಸಿದ್ದೇವೆ. ಆದರೆ ಮಿಹಿರ ಭೋಜ ಮೇಲಿನ ಹಕ್ಕನ್ನು ಹಿಂದೆಗೆದುಕೊಳ್ಳಲು ರಜಪೂತರು ಬಯಸುತ್ತಿಲ್ಲ ’ ಎಂದರು.