'ಮರಣ ಪ್ರಮಾಣಪತ್ರದಲ್ಲಿ ಸಾವಿಗೆ ಕೋವಿಡ್ ಕಾರಣವನ್ನು ಉಲ್ಲೇಖಿಸಿಲ್ಲವೆಂದು ರಾಜ್ಯಗಳು ಪರಿಹಾರ ನಿರಾಕರಿಸುವಂತಿಲ್ಲ'
ಸುಪ್ರೀಂಕೋರ್ಟ್

ಹೊಸದಿಲ್ಲಿ,ಅ.4: ಮರಣ ಪ್ರಮಾಣಪತ್ರದಲ್ಲಿ ಸಾವಿಗೆ ಕಾರಣ ಕೋವಿಡ್ ಎಂದು ಉಲ್ಲೇಖಿಸಿಲ್ಲ ಎಂದ ಮಾತ್ರಕ್ಕೆ ಕೊರೋನವೈರಸ್ನಿಂದ ಮೃತರ ಕುಟುಂಬಗಳಿಗೆ 50,000 ರೂ. ಗಳ ಪರಿಹಾರವನ್ನು ನಿರಾಕರಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ರಾಜ್ಯ ಸರಕಾರಗಳಿಗೆ ತಾಕೀತು ಮಾಡಿದೆ.
ಸಾವಿಗೆ ಕಾರಣ ಕೋವಿಡ್ ಎನ್ನುವುದನ್ನು ಕುಟುಂಬದ ಸದಸ್ಯರು ಅಧಿಕಾರಿಗಳಿಗೆ ಮನವರಿಕೆ ಮಾಡಿದರೆ ಯಾವುದೇ ರಾಜ್ಯವು ಮರಣ ಪ್ರಮಾಣಪತ್ರದಲ್ಲಿ ಸಾವಿಗೆ ಕೋವಿಡ್ ಕಾರಣವೆಂದು ಉಲ್ಲೇಖಿಸಿಲ್ಲವೆಂದು ಪರಿಹಾರವನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು ಹೇಳಿತು.
ಕೊರೋನವೈರಸ್ ಗೆ ಪಾಸಿಟಿವ್ ಆಗಿ 30 ದಿನಗಳಲ್ಲಿ ರೋಗಿಯು ಮೃತಪಟ್ಟರೆ ರೋಗವು ಸಾವಿಗೆ ಕಾರಣವೆಂದು ಪರಿಗಣಿಸಬೇಕು. ಕೋವಿಡ್ ಸಾವುಗಳಿಗೆ ಮರಣ ಪ್ರಮಾಣಪತ್ರಗಳನ್ನು ವಿತರಿಸಲು ಕೇಂದ್ರವು ಕಳೆದ ತಿಂಗಳು ಹೊರಡಿಸಿರುವ ಮಾರ್ಗಸೂಚಿಗಳೇ ನ್ಯಾಯಾಲಯದ ನಿರ್ದೇಶಗಳಾಗಿವೆ ಎಂದು ಅದು ಹೇಳಿತು.
ಕೋವಿಡ್ ನಿಂದ ಮೃತರ ಕುಟುಂಬಗಳಿಗೆ ರಾಜ್ಯ ಸರಕಾರಗಳು 50,000 ರೂ.ಪರಿಹಾರವನ್ನು ಪಾವತಿಸುತ್ತವೆ ಎಂಬ ಕೇಂದ್ರದ ನಿವೇದನೆಯನ್ನು ಒಪ್ಪಿಕೊಂಡ ಸರ್ವೋಚ್ಚ ನ್ಯಾಯಾಲಯವು,ಈ ಪರಿಹಾರವು ಕೇಂದ್ರ ಮತ್ತು ರಾಜ್ಯಗಳು ವಿವಿಧ ಯೋಜನೆಗಳಡಿ ವಿತರಿಸಿರುವ ಮೊತ್ತಕ್ಕೆ ಅತಿರಿಕ್ತವಾಗಿರುತ್ತದೆ ಎಂದು ಸ್ಪಷ್ಟಪಡಿಸಿತು.
ಪರಿಹಾರ ಯೋಜನೆಗೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚಿಸಿತು. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳಂತೆ ದೇಶದಲ್ಲಿ ಸೋಮವಾರದವರೆಗೆ ಕೋವಿಡ್ನಿಂದ 4,48,997 ಜನರು ಮೃತಪಟ್ಟಿದ್ದಾರೆ.