ಬಿಹಾರ ಕಳ್ಳಭಟ್ಟಿ ದುರಂತ: 3 ದಿನಗಳಲ್ಲಿ 30 ಜನರು ಸಾವು

ಬಿಹಾರ, ನ. 6: ಬಿಹಾರದಲ್ಲಿ ಕಳ್ಳಭಟ್ಟಿ ಸೇವಿಸಿ ಕಳೆದ ಮೂರು ದಿನಗಳಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ವಿಷಪೂರಿತ ಮಧ್ಯಸೇವಿಸಿ ಶನಿವಾರ ಸಮಷ್ಠಿಪುರದಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಪಶ್ಚಿಮ ಚಂಪಾರಣ್ ಹಾಗೂ ಗೋಪಾಲ್ಗಂಜ್ನಲ್ಲಿ 13 ಮಂದಿ ಮೃತಪಟ್ಟಿದ್ದಾರೆ.
ಸೇನಾ ಯೋಧ ಹಾಗೂ ಬಿಎಸ್ಎಫ್ ಸಿಬ್ಬಂದಿ ಸೇರಿದಂತೆ ಮೃತಪಟ್ಟ ಎಲ್ಲ ನಾಲ್ಕು ಮಂದಿ ಸಮಷ್ಠಿಪುರದ ನಿವಾಸಿಗಳು. ಈ ಪ್ರದೇಶ ಪಟೋರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ರೂಪೌಲಿ ಪಂಚಾಯತ್ ಅಧಿಕಾರಕ್ಕೆ ಒಳಪಟ್ಟಿದೆ ಎಂದು ಸಮಷ್ಠಿಪುರದ ಪೊಲೀಸ್ ಅಧೀಕ್ಷಕ ಮನ್ವಜೀತ್ ಸಿಂಗ್ ದಿಲ್ಲೋನ್ ಹೇಳಿದ್ದಾರೆ.
‘‘ಅಸ್ವಸ್ಥರಾದ ಇಬ್ಬರು ವ್ಯಕ್ತಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’’ ಎಂದು ದಿಲ್ಲೋನ್ ತಿಳಿಸಿದ್ದಾರೆ. ಕಳ್ಳಭಟ್ಟಿ ಪ್ರಕರಣದಲ್ಲಿ ಆರೋಪಿಗಳೆಂದು ಶಂಕಿಸಲಾಗಿರುವ ರಾಮಾಯಣ್ ರೈ, ಮಿಥಿಲೇಶ್ ರೈ, ಅಚ್ಯಲಾಲ್ ರೈ, ಶ್ಯಾಮ್ದೇವ್ ರೈ ಅವರ ಮಾಹಿತಿ ನೀಡುವಂತೆ ಜಾಹೀರಾತು ಪ್ರಕಟಿಸಲಾಗಿದೆ ಎಂದು ಬೈಕುಂಠಪುರ ಪೊಲೀಸ್ ಅಧಿಕಾರಿ ಪ್ರಾಂತ್ ಕುಮಾರ್ ಅವರು ಹೇಳಿದ್ದಾರೆ.