ಉತ್ತಮ ಆಡಳಿತ ಸೂಚ್ಯಂಕ : ಯಾವ ರಾಜ್ಯಕ್ಕೆ ಯಾವ ಸ್ಥಾನ ಗೊತ್ತೇ ?

ಅಮಿತ್ ಶಾ (ಫೋಟೊ - PTI)
ಹೊಸದಿಲ್ಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರಕಟಿಸಿದ ಸೂಚಕಗಳ ಪ್ರಕಾರ 2020-21ನೇ ಸಾಲಿನ ಉತ್ತಮ ಆಡಳಿತ ಸೂಚ್ಯಂಕ (ಜಿಜಿಐ)ದಲ್ಲಿ ಗುಜರಾತ್ ಅಗ್ರಸ್ಥಾನ ಗಳಿಸಿದೆ. ಮಹಾರಾಷ್ಟ್ರ ಹಾಗೂ ಗೋವಾ ನಂತರದ ಸ್ಥಾನಗಳಲ್ಲಿದ್ದರೆ, ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿ ಅಗ್ರಸ್ಥಾನಿಯಾಗಿದೆ.
2021ರಲ್ಲಿ 20 ರಾಜ್ಯಗಳ ಜಿಜಿಐ ಸುಧಾರಿಸಿದ್ದು, ಉತ್ತರ ಪ್ರದೇಶ ಶೇಕಡ 8.9ರಷ್ಟು ಪ್ರಗತಿ ಸಾಧಿಸಿದೆ. ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ರಾಜಕೀಯ ಹಾನಿಯಾಗುವ ಸಾಧ್ಯತೆ ಇದ್ದರೂ, ಜನರ ಒಳಿತಿಗಾಗಿ ಮೋದಿ ಸರ್ಕಾರ ನಿರ್ಧಾರಗಳ್ನು ಕೈಗೊಂಡಿದೆ ಎಂದು ಹೇಳಿದರು.
ಮೋದಿ ಸರ್ಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ ಆರೋಪ ಇಲ್ಲ ಎಂದು ಅವರು ಹೇಳಿಕೊಂಡರು. ಸ್ವಚ್ಛ ಮತ್ತು ಪಾರದರ್ಶಕ ಆಡಳಿತ, ಉತ್ತಮ ಆಡಳಿತಕ್ಕೆ ಪುರಾವೆ ಎಂದು ಹೇಳಿದರು.
"ಜನರಿಗೆ ಇಷ್ಟವಾಗುವ ನಿರ್ಧಾರಗಳನ್ನು ಮೋದಿ ಎಂದಿಗೂ ತೆಗೆದುಕೊಳ್ಳಲಿಲ್ಲ. ಬದಲಾಗಿ ಜನರಿಗೆ ಉತ್ತಮವಾಗುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಇವೆರಡರ ನಡುವೆ ದೊಡ್ಡ ವ್ಯತ್ಯಾಸವಿದೆ. ಕೆಲ ನಿರ್ಧಾರಗಳು ನಿಮಗೆ ಅಲ್ಪಾವಧಿಯಲ್ಲಿ ಜನಪ್ರಿಯತೆ ತಂದುಕೊಡಬಹುದು. ಆದರೆ ದೇಶಕ್ಕೆ ಸಮಸ್ಯೆ ತರುತ್ತವೆ" ಎಂದು ವಿಶ್ಲೇಷಿಸಿದರು.
ಜಿಜಿಐ ಚೌಕಟ್ಟಿನಲ್ಲಿ 10 ವಲಯಗಳು ಹಾಗೂ 58 ಸೂಚಕಗಳನ್ನು ಒಳಗೊಂಡಿವೆ. ಇವುಗಳಲ್ಲಿ ಕೃಷಿ ಮತ್ತು ಸಂಬಂಧಿತ ವಲಯ, ವಾಣಿಜ್ಯ ಹಾಗೂ ಕೈಗಾರಿಕೆಗಳು, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾರ್ವಜನಿಕ ಮೂಲಸೌಕರ್ಯ ಮತ್ತು ಸೌಲಭ್ಯಗಳು, ಆರ್ಥಿಕ ಆಡಳಿತ, ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿ, ಜನ ಕೇಂದ್ರಿತ ಆಡಳಿತ ಸೇರಿವೆ.