ಕಾಣಿಯೂರು ಗುಂಪು ಹಲ್ಲೆ ಪ್ರಕರಣ: ಸಚಿವರ ತಾರತಮ್ಯಕ್ಕೆ ಕಾಂಗ್ರೆಸ್ ಆಕ್ರೋಶ
ಯು.ಪಿ.ಇಬ್ರಾಹೀಂ
ಮಂಗಳೂರು: ಕಡಬ ತಾಲೂಕಿನ ಕಾಣಿಯೂರು ಗುಂಪು ಹಲ್ಲೆ ಪ್ರಕರಣದ ಬಗ್ಗೆ ಸಚಿವ ಅಂಗಾರರ ತಾರತಮ್ಯ ನೀತಿಗೆ ದ.ಕ.ಜಿಪಂ ಮಾಜಿ ಸದಸ್ಯ ಯು.ಪಿ.ಇಬ್ರಾಹೀಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಡ್ಡೂರಿನ ಇಬ್ಬರು ಜವಳಿ ವ್ಯಾಪಾರಿಗಳನ್ನು ಮುಸ್ಲಿಮರು ಎಂಬ ಏಕೈಕ ಕಾರಣಕ್ಕೆ ಮಾರಣಾಂತಿಕವಾಗಿ ಗುಂಪು ಹಲ್ಲೆ ನಡೆಸಿದೆ. ವ್ಯಾಪಾರಿಗಳು ತಪ್ಪು ಮಾಡಿದ್ದಲ್ಲಿ ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಬಹುದಿತ್ತು. ಆದರೆ ದುಷ್ಕರ್ಮಿಗಳು ಕಾನೂನು ಕೈಗೆತ್ತಿಕೊಂಡಿದ್ದರೂ ಪೊಲೀಸ್ ಇಲಾಖೆ ಅವರ ವಿರುದ್ಧ ಕಠಿಣ ಕ್ರಮ ಜರಗಿಸಿಲ್ಲ. ಸಚಿವ ಅಂಗಾರರು ದೂರದಾರ ಮಹಿಳೆಯ ಮನೆಗೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಆದರೆ ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಭೇಟಿಯಾಗಲಿಲ್ಲ. ಸತ್ಯಾಂಶವನ್ನು ಅರಿಯಲಿಲ್ಲ. ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸವನ್ನೂ ಮಾಡಲಿಲ್ಲ. ಬದಲಾಗಿ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳಿಗೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸುವಂತಹ ನಡೆ ಪ್ರದರ್ಶಿಸಿರುವುದು ಮತ್ತು ತಾರತಮ್ಯ ಎಸಗಿರುವುದು ಖಂಡನೀಯ ಎಂದು ಯುಪಿ ಇಬ್ರಾಹೀಂ ತಿಳಿಸಿದ್ದಾರೆ.
ಪ್ರಕರಣವನ್ನು ಪುತ್ತೂರು ಡಿವೈಎಸ್ಪಿಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಮುಂದಿನ ದಿನಗಳಲ್ಲಿ ಇಂತಹ ಅಮಾನವೀಯ ಘಟನೆ ನಡೆಯದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದ್ದಾರೆ.