ಶಿಕ್ಷಣ ಸಂಸ್ಥೆಗಳು ಪರಿಪೂರ್ಣ ವ್ಯಕ್ತಿಗಳನ್ನು ನಿರ್ಮಿಸಲಿ: ಮುಹಮ್ಮದ್ ಕುಂಞಿ

ಉಡುಪಿ, ಜ.22: ತೋನ್ಸೆ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿತೈಷಿಗಳ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರಿಸ್ ಹೂಡೆ ಅಧ್ಯಕ್ಷತೆ ಯಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಾತನಾಡಿ, ಶಿಕ್ಷಣ ಸಂಸ್ಥೆ ಸಮಾಜಕ್ಕೆ ಪರಿಪೂರ್ಣ ವ್ಯಕ್ತಿಗಳನ್ನು ನೀಡುವ ಕೇಂದ್ರವಾಗಬೇಕೆ ಹೊರತು ಕೇವಲ ವ್ಯವಹಾರಿಕ ಕೇಂದ್ರಗಳಾಗಬಾರದು. ವಿದ್ಯಾರ್ಥಿಗಳು ಜೀವನದ ಪರೀಕ್ಷೆ ಎದುರಿಸುವಲ್ಲಿ ಸಮರ್ಥರನ್ನಾಗಿ ಮಾಡಬೇಕು. ತಮ್ಮ ಮಕ್ಕಳಿಗೆ ಅವರವರ ತಂದೆ ತಾಯಿಗಳೇ ಮಾದರಿ ಯಾಗಬೇಕು. ಮಕ್ಕಳ ಭವಿಷ್ಯ ಪೋಷಕರ ವರ್ತನೆಯಲ್ಲಿ ಅಡಗಿದೆ ಎಂದು ಹೇಳಿದರು.
ಸಾಲಿಹಾತ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಶಿಕ್ಷಣ ಸಂಸ್ಥೆ ಬೆಳೆದು ಬಂದ ಹಾದಿಯನ್ನು ಸವಿವರವಾಗಿ ಹೇಳಿದರು. ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಡಾ.ಶಹನವಾಝ್, ಹಿರಿಯ ಟ್ರಸ್ಟಿ ಮೌಲಾನಾ ಆದಂ ಸಾಹೇಬ್, ಎಚ್.ಆರ್.ಎಸ್.ನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮರಕಡ ಉಪಸ್ಥಿತರಿದ್ದರು.
ಶಿಕ್ಷಣ ಸಂಸ್ಥೆಯ ಖಜಾಂಚಿ ಅಬ್ದುಲ್ ಖಾದರ್ ಸ್ವಾಗತಿಸಿದರು. ಇಬ್ರಾಹಿಂ ಸಾಹೇಬ್ ಕಿರಾತ್ ಪಠಿಸಿದರು. ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಸಂದೇಶ ವಾಚಿಸಿದರು. ಟ್ರಸ್ಟಿ ಹುಸೇನ್ ಕೋಡಿಬೆಂಗ್ರೆ ವಂದಿಸಿದರು. ಯಾಸೀನ್ ಕೋಡಿ ಬೆಂಗ್ರೆ ಕಾರ್ಯಕ್ರಮ ನಿರ್ವಹಿಸಿದರು.