ಜ.24ರಂದು ಬಿ.ಕೆ.ಹರಿಪ್ರಸಾದ್ ಪುಸ್ತಕ ಬಿಡುಗಡೆ
ಉಡುಪಿ, ಜ.22: ತುಳು-ಕೊಡವ ಭಾಷೆಗಳ ಅಳಿವು ಉಳಿವು ಹಾಗೂ ಈ ಭಾಷೆಗಳನ್ನು ಸಂವಿಧಾನ ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸುವ ಕುರಿತಂತೆ ಒತ್ತಾಯಿಸಿ ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಬಿ.ಕೆ.ಹರಿಪ್ರಸಾದ್ ಅವರು ಸಂಸತ್ನಲ್ಲಿ ಮಾಡಿದ ಭಾಷಣಗಳ ಸಂಗ್ರಹದ ಕೃತಿ ಜ.24ರಂದು ಉಡುಪಿಯಲ್ಲಿ ಬಿಡುಗಡೆಗೊಳ್ಳಲಿದೆ.
ಜ.24ರಂದು ಬೆಳಗ್ಗೆ 11 ಗಂಟೆಗೆ ಬಡಗುಬೆಟ್ಟು ಸಭಾಭವನದ ಕಟ್ಟಡ ಜಗನ್ನಾಥ ಸಭಾಭವನದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ಅಮೃತ ಶೆಣೈ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಖ್ಯಾತ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರು ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಬಿ.ಕೆ.ಹರಿಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ತುಳುಕೂಟ ಉಡುಪಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಶಿಕ್ಷಣ ತಜ್ಞ ಹಾಗೂ ಡಾ.ಟಿಎಂಎಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ ಡಾ.ಮಹಾಬಲೇಶ್ವರ ರಾವ್ ಹಾಗೂ ಮಂಗಳೂರು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಸಾಮಾಜಿಕ ಮುಖಂಡರಾದ ನಾರಾಯಣ ಶೇರಿಗಾರ್ ಹಾಗೂ ಯಜ್ಞೇಶ್ ಆಚಾರ್ಯ ಉಪಸ್ಥಿತರಿದ್ದರು.