ಅಂಬೇಡ್ಕರ್ಗೆ ಅವಮಾನ ಮಾಡಿದ ಆರೋಪ; ನ್ಯಾಯಾಧೀಶರ ಪ್ರತಿಕೃತಿ ದಹಿಸಿ ಪ್ರತಿಭಟನೆ

ಕುಂದಾಪುರ, ಫೆ.3: ಗಣರಾಜ್ಯೋತ್ಸವ ಆಚರಣೆ ವೇಳೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸುವ ಮೂಲಕ ಅವಮಾನ ಮಾಡಿರುವ ರಾಯಚೂರು ನ್ಯಾಯಾಧೀಶರ ಕ್ರಮ ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬುಧವಾರ ಸಂಜೆ ಕುಂದಾಪುರ ಹೊಸ ಬಸ್ ನಿಲ್ದಾಣದಿಂದ ಶಾಸ್ತ್ರೀ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿ, ನ್ಯಾಯಾಧೀಶರ ಪ್ರತಿಕೃತಿ ದಹಿಸಲಾಯಿತು.
ಬಳಿಕ ಶಾಸ್ತ್ರೀ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ದಲಿತ ಹೋರಾಟಗಾರ ಜಯನ್ ಮಲ್ಪೆ, ಗಣರಾಜ್ಯೋತ್ಸವ ದಿನದಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣೆ ಮಾಡುವುದಾಗಿ ಹೇಳಿ ಜಿಲ್ಲಾ ನ್ಯಾಯಾಧೀಶರು ಮಹಾನಾಯಕರಿಗೆ ಅಪಮಾನ ಮಾಡಿದ್ದಾರೆ. ಸಂವಿಧಾನವನ್ನು ಒಪ್ಪಿ ಸ್ವೀಕರಿಸಿದ ನ್ಯಾಯಾಧೀಶರು ಹೀಗೆ ವರ್ತಿಸುವುದು ಕೇವಲ ದಲಿತ ಸಮಾಜಕ್ಕೆ ಅಲ್ಲ, ಇಡೀ ರಾಷ್ಟ್ರಕ್ಕೆ ಮಾಡಿದ ಅಪಮಾನ ಎಂದು ಆರೋಪಿಸಿದರು.
ದುರ್ವರ್ತನೆ ತೋರಿದ ನ್ಯಾಯಾಧೀಶರನ್ನು ಬಂಧಿಸಿ, ಸೇವೆಯಿಂದ ಅಮಾನತು ಮಾಡಬೇಕು. ಅವರ ಮತದಾನದ ಹಕ್ಕು ಕಸಿಯಬೇಕು. ಆಸ್ತಿಪಾಸ್ತಿ ಮುಟ್ಟುಗೋಲು ಹಾಕಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ರಾಷ್ಟ್ರ ನಾಯಕರಿಗೆ ಅಪಮಾನವಾದಾಗಲೂ ರಾಜ್ಯದ ಕಾನೂನು ಸಚಿವ, ಮುಖ್ಯಮಂತ್ರಿ ಮಾತಾಡದೇ ಇರುವುದು ಬೇಸರ, ನಾಚಿಕೆಗೇಡು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ನ್ಯಾಯವಾದಿ ಇಲಿಯಾಸ್ ನಾವುಂದ, ಸುರೇಶ್ ಬಾರಕೂರು, ಪ್ರಭಾಕರ್ ವಿ., ಸುರೇಶ್ ಹಕ್ಲಾಡಿ, ದಸಂಸ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಬೈಂದೂರು ತಾಲೂಕು ಸಂಚಾಲಕ ನಾಗರಾಜ್ ಉಪ್ಪುಂದ, ಪೌರಕಾರ್ಮಿಕ ಸಂಘ ಜಿಲ್ಲಾಧ್ಯಕ್ಷ ನಾಗರಾಜ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.