ಹಿಜಾಬ್ ಸಮಸ್ಯೆ ಬಗ್ಗೆ ಸರಕಾರದಿಂದ ಸೂಕ್ತ ನಿರ್ಧಾರ: ಸಚಿವ ಎಸ್. ಅಂಗಾರ
ಉಡುಪಿ, ಫೆ.3: ಇದೀಗ ಜಿಲ್ಲೆಯ ಹಲವು ಕಾಲೇಜುಗಳಿಗೆ ವಿಸ್ತರಿಸಿರುವ ಹಿಜಾಬ್ ಸಮಸ್ಯೆ ಕುರಿತಂತೆ ಜಿಲ್ಲಾಡಳಿತದೊಂದಿಗೆ ಚರ್ಚಿಸುತ್ತೇನೆ. ಈ ವಿಷಯದಲ್ಲಿ ಒಂದೊಂದು ಕಾಲೇಜಿಗೆ ಒಂದೊಂದು ನಿಯಮ ಮಾಡಲು ಸಾಧ್ಯವಿಲ್ಲ. ಸರಕಾರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ತೆರೆಯಲಾ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಈ ವಿಷಯ ದಲ್ಲಿ ಗೊಂದಲವನ್ನು ಉಂಟುಮಾಡದಂತೆ ತಾನು ಸಾರ್ವಜನಿಕರು ಹಾಗೂ ಎಲ್ಲಾ ಶಾಲಾ ಮುಖ್ಯಸ್ಥರಿಗೆ ಮನವಿ ಮಾಡುವುದಾಗಿ ಅವರು ತಿಳಿಸಿದರು.
ಸರಕಾರ ಈ ವಿಷಯದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ತಿಳಿಸಿದೆ. ಯಥಾಸ್ಥಿತಿ ಅಂದರೆ ಏನು ಎಂದು ಪ್ರಶ್ನಿಸಿದಾಗ, ಸರಕಾರ ಈ ಬಗ್ಗೆ ತಜ್ಞರ ಸಮಿತಿಯೊಂದನ್ನು ರಚಿಸಿದೆ. ಅದರ ವರದಿ ಆಧಾರದಲ್ಲಿ ಕ್ರಮಕೈಗೊ ಳ್ಳಲಾಗುವುದು ಎಂದರು. ಸರಕಾರ ಒಂದು ನಿಯಮ ಮಾಡಿದ ಮೇಲೆ ಅದನ್ನು ಎಲ್ಲರೂ ಪಾಲಿಸಬೇಕು ಎಂದರು.
ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನಾನು ನಿಯುಕ್ತಿಗೊಂಡಿದ್ದೇನೆ. ಇನ್ನೀಗ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಗಮನ ಹರಿಸುತ್ತೇನೆ. ಜಿಲ್ಲೆಯ ಸಮಸ್ಯೆಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು, ಇದಕ್ಕಾಗಿ ಕೆಡಿಪಿ ಸಭೆ ಕರೆಯುವುದಾಗಿ ತಿಳಿಸಿದರು.
ಮೀನುಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ, ಮೀನುಗಾರರ ಸಮಸ್ಯೆ ಬಗ್ಗೆ ಗಮನ ಹರಿಸುತ್ತೇನೆ. ಮೀನುಗಾರರ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಬಜೆಟ್ನಲ್ಲಿ ಇಲಾಖೆಯಿಂದ ಅವರು ನಿರೀಕ್ಷಿಸುವ ಸೌಲಭ್ಯ, ಆಗಬೇಕಾದ ಕೆಲಸದ ಬಗ್ಗೆ ಮಾಹಿತಿ ಕಲೆಹಾಕುತ್ತೇನೆ. ಅದನ್ನು ಫೆ.11ರಂದು ಮುಖ್ಯಮಂತ್ರಿ ಗಳೊಂದಿಗೆ ನಡೆಯುವ ಸಭೆಯಲ್ಲಿ ಅವರ ಮುಂದಿಡುವುದಾಗಿ ಅಂಗಾರ ತಿಳಿಸಿದರು.
ಜಿಲ್ಲೆಯ ಉಸ್ತುವಾರಿ ಸಚಿವ ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುತ್ತೇನೆ. ಮೀನುಗಾರರಿಗೆ ಸಿಗಬೇಕಾದ ಸೀಮೆಎಣ್ಣೆ ಹಾಗೂ ಡೀಸೆಲ್ ಸಬ್ಸಿಡಿ ಈಗಾಗಲೇ ಬಿಡುಗಡೆಯಾಗಿದೆ. ಇನ್ನಷ್ಟು ಸ್ವಲ್ಪ ಮಾತ್ರ ಬಾಕಿ ಇದ್ದು, ಅದನ್ನು ಸಹ ಶೀಘ್ರ ಬಿಡುಗಡೆಗೆ ಪ್ರಯತ್ನಿಸುತ್ತೇನೆ ಎಂದರು.
ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ಈಗಾಗಲೇ ಸುಳ್ಯ ಮತ್ತು ಪುತ್ತೂರಿನಲ್ಲಿ ಕಾರ್ಯಾಗಾರ ಏರ್ಪಡಿ ಸಿದ್ದು, ಇನ್ನೊಂದು ಬಂಟ್ವಾಳದಲ್ಲಿ ಆಯೋಜನೆಗೊಳ್ಳಲಿದೆ. ಮುಂದೆ ಉಡುಪಿ ಜಿಲ್ಲೆಯಲ್ಲೂ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು.
ಕಚೇರಿ ಉದ್ಘಾಟನೆ: ಇದಕ್ಕೆ ಮುನ್ನ ಉಸ್ತುವಾರಿ ಸಚಿವರ ನೂತನ ಕಚೇರಿಯನ್ನು ಸಚಿವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಯಶ್ಪಾಲ್ ಸುವರ್ಣ, ಮಹೇಶ್ ಠಾಕೂರ್, ನಯನ ಗಣೇಶ್ ಮುಂತಾದವರು ಉಪಸ್ಥಿತರಿದ್ದರು.