ಕ್ಯಾನ್ಸರ್ನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಿದರೆ ಗುಣಮುಖರಾಗಲು ಸಾಧ್ಯ: ಸುಮಿತ್ರಾ ನಾಯಕ್

ಉಡುಪಿ, ಫೆ.4: ಕ್ಯಾನ್ಸರ್ ರೋಗದ ಗುಣಲಕ್ಷಣಗಳನ್ನು ಅರಿತುಕೊಂಡು, ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದಲ್ಲಿ, ಕ್ಯಾನ್ಸರ್ನಿಂದ ಗುಣಮುಖವಾಗಲು ಸಾಧ್ಯವಿದೆ ಎಂದು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಹೇಳಿದ್ದಾರೆ.
ಶುಕ್ರವಾರ ಅಜ್ಜರಕಾಡು ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಸ್ಪತ್ರೆ (ಎನ್ಸಿಡಿ ವಿಭಾಗ), ಜಿಲ್ಲಾ ಸರ್ವೇಕ್ಷಣಾ ಘಟಕ (ಎನ್ಸಿಡಿಎನ್ಟಿಸಿಪಿ ಘಟಕ), ದಂತ ವೈದ್ಯಕೀಯ ವಿಭಾಗ ಜಿಲ್ಲಾ ಆಸ್ಪತ್ರೆ, ಭಾರತೀಯ ದಂತ ವೈದ್ಯಕೀಯ ಮಂಡಳಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ, ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಹಯೋಗದಲ್ಲಿ ನಡೆದ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾನ್ಸರ್ ಬಂದರೆ ಜೀವನ ಕೊನೆಯಾಯಿತು ಎಂಬ ಭಾವನೆ ಇದೆ. ಆದರೆ ಎಲ್ಲಾ ಕ್ಯಾನ್ಸರ್ ಮಾರಣಾಂತಿಕವಲ್ಲ. ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ, ಗುಣಮುಖರಾಗಲು ಸಾಧ್ಯವಿದೆ. ಸಾರ್ವಜನಿಕರಿಗೆ ಕ್ಯಾನ್ಸರ್ನ ಲಕ್ಷಣಗಳ ಬಗ್ಗೆ ಸಂಪೂರ್ಣ ಅರಿವು ಹಾಗೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ, ಜಿಲ್ಲೆಯ ರೋಟರಿ, ಲಯನ್ಸ್ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಘಗಳ ಸಹಕಾರದಿಂದ ಜಿಲ್ಲೆಯಾದ್ಯಂತ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಗುವುದು. ಕ್ಯಾನ್ಸರ್ ಕಾಯಿಲೆಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ಲಭ್ಯವಿದ್ದು, ಕಾಯಿಲೆಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ತಪಾಸಣೆ ಮಾಡಿಸಿಕೊಳ್ಳುವುದರಿಂದ,ರೋಗ ಉಲ್ಬಣವಾಗುವುದನ್ನು ತಡೆಯಲು ಮತ್ತು ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಜಾಗೃತಿ ಕುರಿತು ಭಿತ್ತಿಪತ್ರವನ್ನು ಬಿಡುಗಡೆ ಗೊಳಿಸಲಾಯಿತು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಂಸಿ ಮಣಿಪಾಲದ ಕ್ಯಾನ್ಸರ್ ತಜ್ಞ ಡಾ.ನವೀನ್ ವಿಶೇಷ ಉಪನ್ಯಾಸ ನೀಡಿದರು. ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಐಎಂಎ ಅಧ್ಯಕ್ಷ ಡಾ.ವಿನಾಯಕ ಶೆಣ್ಯೆ, ಜಿಲ್ಲಾ ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾ.ಬೀಸು ನಾಯಕ್ ಉಪಸ್ಥಿತರಿದ್ದರು.
ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ರಾಜೇಂದ್ರ ಕೆ. ಸ್ವಾಗತಿಸಿದರು. ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕ ಮನು ಎಸ್.ಬಿ. ಕಾರ್ಯಕ್ರಮ ಸಂಘಟಿಸಿ ವಂದಿಸಿದರು. ಆಪ್ತ ಸಮಾಲೋಚಕ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.