ಶಾಲೆಯ ನಿಯಮಗಳಿಗೆ ಒಪ್ಪದಿದ್ದರೆ ಬೇರೆ ದಾರಿ ನೋಡಿಕೊಳ್ಳಲಿ: ನಳಿನ್ ಕುಮಾರ್ ಕಟೀಲು

ಮಂಗಳೂರು, ಫೆ.5: ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು, ಹಿಜಾಬ್‌ನಂತಹ ವಿವಾದಕ್ಕೆ ಆಸ್ಪದವಿಲ್ಲ. ಶಾಲೆ ಸರಸ್ವತಿ ಮಂದಿರ. ಶಾಲೆಯ ನಿಯಮ, ಅನುಶಾಸನ ಪಾಲಿಸಿಕೊಂಡು ಕಲಿಯುವುದ ಧರ್ಮ. ಅದರ ಜೊತೆಗೆ ಧರ್ಮವನ್ನು ಬೆರೆಸುವುದು ಸರಿಯಲ್ಲ. ಶಾಲೆಯ ನಿಯಮಗಳಿಗೆ ಒಪ್ಪದಿದ್ದರೆ ಬೇರೆ ದಾರಿ ನೋಡಿಕೊಳ್ಳಲಿ ಎಂದು ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ. ಟಿಪ್ಪು ಜಯಂತಿ, ಶಾದಿಭಾಗ್ಯದಂತಹ ಯೋಜನೆಗಳ ರೂವಾರಿ ಸಿದ್ದರಾಮಯ್ಯ, ಹಿಜಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಆಡಳಿತ ಕಾಲದಲ್ಲಿ ಸಾಮರಸ್ಯ ಕದಡುವ ಎಷ್ಟು ಘಟನೆಗಳು ನಡೆದಿವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಸಂಪುಟ ವಿಸ್ತರಣೆ: ಸಿಎಂ ವಿವೇಚನೆ ಬಿಟ್ಟ ವಿಚಾರ
ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟಿದ್ದು. ಅಗತ್ಯ ಎನಿಸಿದಾಗ ಪಕ್ಷದ ರಾಷ್ಟ್ರೀಯ ನಾಯಕರ ಜೊತೆಗೆ ಮಾತನಾಡಿ ಈ ಬಗ್ಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ನಳಿನ್‌ಕುಮಾರ್ ಕಟೀಲು ಹೇಳಿದರು.
ಶಾಸಕರಾದವರು ಸಚಿವರಾಗಬೇಕು ಎನ್ನುವ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ, ಆ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದರು.