'ನಮ್ಮ ಶಾಂತಿಯುತ ಹೋರಾಟವನ್ನು ಕೋಮು ವಿವಾದವನ್ನಾಗಿಸಿದರು'
'ಹಿಜಾಬ್ ನಮ್ಮ ಹಕ್ಕು’ ಹೋರಾಟ ಆರಂಭಿಸಿದ ವಿದ್ಯಾರ್ಥಿನಿಯರ ಅಳಲು

ಉಡುಪಿ, ಫೆ.7: "ನಾವು ಶಾಂತಿಯುತವಾಗಿ ನಮ್ಮ ಹಕ್ಕನ್ನು ಕೇಳುತ್ತಿದ್ದೇವು. ಆದರೆ ಶಾಸಕ ರಘುಪತಿ ಭಟ್ ಸಭೆಯೊಂದರಲ್ಲಿ ಹೇಳಿಕೆ ನೀಡಿ, ನೀವು ಹಿಜಾಬ್ ಹಾಕಿದರೆ ನಾಳೆ ಬೇರೆಯವರು ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ ಎಂದಿದ್ದರು. ಆ ದಿನದಿಂದ ಎಲ್ಲ ಕಾಲೇಜಿನಲ್ಲಿ ಕೇಸರಿ ವಿವಾದ ಉಂಟಾಗಿತ್ತು. ಕೇಸರಿ ಶಾಲು ಹಾಕಿ ಬರುವಂತೆ ವಿದ್ಯಾರ್ಥಿಗಳ ಮನಸ್ಸಿಗೆ ಪ್ರಚೋದನೆ ನೀಡಿರುವುದು ಅವರೇ ಹೊರತು ನಾವಲ್ಲ"
ಇದು ‘ಹಿಜಾಬ್ ನಮ್ಮ ಹಕ್ಕು, ಅದಕ್ಕೆ ಅವಕಾಶ ನೀಡಿ ತರಗತಿಗೆ ಪ್ರವೇಶ ಕಲ್ಪಿಸಿ’ ಎಂದು ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಮಾತುಗಳು.
ಕಾಲೇಜು ಆವರಣದಲ್ಲಿ ಸೋಮವಾರ ಈ ವಿದ್ಯಾರ್ಥಿನಿಯರು 'ವಾರ್ತಾಭಾರತಿ'ಯೊಂದಿಗೆ ತಮ್ಮ ಹೋರಾಟದ ಕುರಿತು ಮಾತನಾಡಿದರು. ಈ ಹೋರಾಟ ಈಗ ರಾಜ್ಯದ ಎಲ್ಲ ಕಡೆ ವಿವಾದ ಉಂಟು ಮಾಡುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ಆಯಿಷಾ ಅಲ್ಮಾಸ್, ನಮಗೆ ಆ ರೀತಿಯ ಯಾವುದೇ ಉದ್ದೇಶ ಇಲ್ಲ. ಈ ಮಟ್ಟಕ್ಕೆ ಹೋಗುತ್ತದೆ ಎಂದು ನಾವು ಭಾವಿಸಿರಲಿಲ್ಲ. ಈ ವಿವಾದಕ್ಕೆ ಸರಕಾರವೇ ನೇರ ಹೊಣೆಯಾಗಿದೆ. ಆದುದರಿಂದ ಅವರೇ ಸಮಸ್ಯೆ ಪರಿಹರಿಸಬೇಕು. ನಮಗೆ ನಮ್ಮ ಹಕ್ಕು ಬೇಕು. ನಾವು ಅದಕ್ಕಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
‘ನಮ್ಮ ಹೋರಾಟವನ್ನು ಕಮ್ಯುನಲ್ ಆಗಿ ಮಾಡಲಾಗಿದೆ. ಶಾಸಕರ ಹೇಳಿಕೆ ಬಳಿಕ ಕೆಲವರು ಕೇಸರಿ ಶಾಲು ಹಾಕಲು ಆರಂಭಿಸಿದರು. ಅಲ್ಲಿಂದ ಇದು ಕಮ್ಯುನಲ್ ಆಗಿ ಪರಿವರ್ತನೆಗೊಂಡಿದೆ. ಈ ವಿವಾದವನ್ನು ಅವರೇ ಹುಟ್ಟು ಹಾಕಿದರು’ ಎಂದು ವಿದ್ಯಾರ್ಥಿನಿ ಹಝ್ರಾ ಶಿಫಾ ಆರೋಪಿಸಿದರು.
'ಯಾರ ಬಲವಂತವೂ ಇಲ್ಲ'
ಈ ಹೋರಾಟದ ಹಿಂದೆ ಸಂಘಟನೆಗಳ ಒತ್ತಡ ಇವೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅಲ್ಮಾಸ್, ಆರಂಭದಲ್ಲಿ ನಾವು ಮತ್ತು ನಮ್ಮ ಪೋಷಕರು ಮಾತ್ರ ಹಿಜಾಬ್ಗೆ ಅವಕಾಶ ನೀಡುವಂತೆ ಪ್ರಾಂಶುಪಾಲರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಇದಕ್ಕೆ ಪರಿಹಾರ ಸಿಗದಿದ್ದಾಗ ಕೊನೆಗೆ ನಾವು ಸಂಘಟನೆಯವರ ಮೊರೆ ಹೋಗಿದ್ದೇವೆ. ಅಲ್ಲಿಂದ ಇಲ್ಲಿವರೆಗೆ ಅವರು ನಮಗೆ ಬೆಂಬಲ ನೀಡುತ್ತಿದ್ದಾರೆ. ಆದರೆ ಅವರು ಯಾವುದೇ ರೀತಿ ಬಲವಂತ ಮಾಡುತ್ತಿಲ್ಲ. ಅದೆಲ್ಲವೂ ಆಧಾರರಹಿತ ಹಾಗೂ ಸುಳ್ಳು ಆರೋಪಗಳಾಗಿವೆ. ನಮ್ಮ ಹಕ್ಕು ನಮಗೆ ಬೇಕಿತ್ತು. ಅದಕ್ಕೆ ನಾವು ಮುಂದೆ ಹೆಜ್ಜೆ ಇಟ್ಟಿದ್ದೇವೆ. ಸಂಘಟನೆಯವರಿಗೆ ಬೇಕಿದ್ದರೆ ಅವರೇ ಮುಂದೆ ಬಂದು ಮಾತನಾಡುತ್ತಿದ್ದರೆಂದು ಸ್ಪಷ್ಟಪಡಿಸಿದರು.
ಕಾಲೇಜಿಗೆ ಬರುವುದು ನಮ್ಮ ಕರ್ತವ್ಯವಾಗಿದೆ. ನಾವು ಹಿಜಾಬ್ ಹಾಕಿ ಕೊಂಡೆ ಬರುತ್ತಿದ್ದೇವೆ. ನಮ್ಮನ್ನು ತರಗತಿಗೆ ತೆಗೆದುಕೊಳ್ಳಬೇಕೆ ಬೇಡವೇ ಎಂಬುದು ಅವರಿಗೆ ಬಿಟ್ಟ ವಿಚಾರ. ಮುಂದೆ ನಾವು ಕಾಲೇಜಿಗೆ ಬಂದೇ ಇಲ್ಲ ಎಂದು ಹೇಳಬಾರದು ಮತ್ತು ಆ ಕಾರಣಕ್ಕೆ ಹಾಜರಾತಿ ನೀಡದೆ ಇರಬಾರದು ಎಂಬ ಉದ್ದೇಶದಿಂದ ಕಳೆದ ಒಂದೂವರೆ ತಿಂಗಳಿನಿಂದ ಪ್ರತಿದಿನ ಕಾಲೇಜಿಗೆ ಬರುತ್ತಿದ್ದೇವೆ. ಮುಂದೆ ನಮಗೆ ನ್ಯಾಯ ಸಿಗುವವರೆಗೂ ಬರುತ್ತಿರುತ್ತೇವೆ ಎಂದು ಅವರು ತಿಳಿಸಿದರು.
'ಮಾನಸಿಕವಾಗಿ ತುಂಬಾ ಒತ್ತಡಕ್ಕೆ ಒಳಗಾಗಿದ್ದೇವೆ'
ಹೋರಾಟದಿಂದ ಶಿಕ್ಷಣಕ್ಕೆ ತೊಂದರೆ ಆಗುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅಲ್ಮಾಸ್, ಶಿಕ್ಷಣಕ್ಕೆ ತುಂಬಾ ಸಮಸ್ಯೆ ಆಗುತ್ತಿದೆ. ಇದನ್ನು ಕಾಲೇಜಿನವರು ಅರ್ಥ ಮಾಡಬೇಕು. ನಾವು ಮನೆಯಲ್ಲಿ ಕುಳಿತು ಓದಲು ತುಂಬಾ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಏಕಾಗ್ರತೆ ಕಷ್ಟವಾಗುತ್ತಿದೆ. ಕಾಲೇಜಿನ ಹೊರಗೆ ಕುಳಿತು ನೋಟ್ಸ್ ಕಂಪ್ಲೀಟ್ ಮಾಡುತ್ತಿದ್ದೇವೆ. ಮಾನಸಿಕವಾಗಿ ನಾವು ತುಂಬಾ ಒತ್ತಡಕ್ಕೆ ಒಳಗಾಗಿದ್ದೇವೆ ಎಂದು ಅಳಲು ತೋಡಿಕೊಂಡರು.
‘ಹೈಕೋರ್ಟ್ ತೀರ್ಪು ನಮ್ಮ ಪರವಾಗಿ ಬಂದ ನಂತರ ತರಗತಿಗೆ ತೆರಳಿ ನಾವು ತುಂಬಾ ಉತ್ತಮವಾಗಿ ಓದಿ ಒಳ್ಳೆಯ ಅಂಕ ತೆಗೆದು ಪಾಸಾಗುತ್ತೇವೆ. ಸದ್ಯ ಯೂಟ್ಯೂಬ್ ತರಗತಿಗಳನ್ನು ನೋಡಿ ಕಲಿಯುತ್ತಿದ್ದೇವೆ. ಈ ತಿಂಗಳ ಲ್ಯಾಬ್ ಪ್ರಾಕ್ಟಿಕಲ್ ಅಂತಿಮ ಪರೀಕ್ಷೆ ಇದೆ. ಅದಕ್ಕೆ ತಯಾರಿ ಮಾಡುವುದು ಕಷ್ಟವಾಗುತ್ತಿದೆ. ಮುಂದೆ ನಾನು ಕಾರ್ಡಿಯೋ ಟೆಕ್ನಿಶಿಯನ್ ಆಗಬೇಕೆಂದಿದ್ದೇನೆ. ಹಾಗೆ ನಾವೆಲ್ಲ ಒಂದೊಂದು ಗುರಿಯೊಂದಿಗೆ ಉನ್ನತ ಶಿಕ್ಷಣ ಮುಂದುವರಿಸುತ್ತೇವೆ. ಪೋಷಕರು ನಮಗೆ ಶಿಕ್ಷಣ ನೀಡುವುದಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಅಲ್ಮಾಸ್ ಹೇಳಿದರು.
'ನ್ಯಾಯಾಂಗ ವ್ಯವಸ್ಥೆಯಲ್ಲಿ ಭರವಸೆ'
"ಸಮವಸ್ತ್ರ ಕಡ್ಡಾಯದ ಕುರಿತು ಸರಕಾರ ಆದೇಶ ಮೊನ್ನೆಯಷ್ಟೇ ಬಂದಿದೆ. ಅದಕ್ಕಿಂತ ಮೊದಲೇ ನಾವು ಹೈಕೋರ್ಟ್ಗೆ ರಿಟ್ ಹಾಕಿದ್ದೇವೆ. ಆದುದರಿಂದ ಹೈಕೋರ್ಟ್ ಆದೇಶಕ್ಕೆ ನಾವು ಕಾಯುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರಾದ ಅಲ್ಮಾಸ್ ಹಾಗೂ ಹಝ್ರಾ ಶಿಫಾ ತಿಳಿಸಿದರು.
ಆದೇಶ ಬಂದ ನಂತರ ಮುಂದೆ ಏನು ಮಾಡಬೇಕು ಎಂದು ನಾವು ಯೋಚಿಸುತ್ತೇವೆ. ಹೈಕೋರ್ಟ್ ನಾಳೆ ಮಧ್ಯಂತರ ಆದೇಶ ನೀಡಲಿದೆ. ನಮ್ಮ ಪರವಾಗಿ ಆದೇಶ ಬರಬಹುದು ಎಂಬ ವಿಶ್ವಾಸ ನಮಗೆ ಇದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ಭರವಸೆ ಇದೆ ಎಂದು ಅವರು ತಿಳಿಸಿದರು.
'ನಮ್ಮ ಸಹಪಾಠಿ ಸ್ನೇಹಿತರನ್ನೇ ಎತ್ತಿಕಟ್ಟಿದರು’
ಕಾಲೇಜಿನವರು ತುಂಬಾ ಹಿಂಸೆ ನೀಡುತ್ತಿದ್ದಾರೆ. ಆರಂಭದಲ್ಲಿ ನಮ್ಮ ಸಹಪಾಠಿಗಳೆಲ್ಲ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಹೇಳಿದ್ದರು. ಈಗ ಅವರು ಉಪನ್ಯಾಸಕರ ಮಾತು ಕೇಳಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ನಮ್ಮ ವಿರುದ್ಧವೇ ದೂರು ನೀಡಿದ್ದಾರೆ. ಇದು ಅವರಾಗಿಯೇ ಹೋಗಿರುವುದಲ್ಲ. ಉಪನ್ಯಾಸಕರು ಒತ್ತಡ ಹಾಕಿ ಕಳುಹಿಸಿರುವುದು. ಅವರೆಲ್ಲ ನಮ್ಮ ಸ್ನೇಹಿತರಾಗಿ ತುಂಬಾ ಆತ್ಮೀಯರಾಗಿದ್ದರು. ಅವರು ಹಾಗೇ ಮಾಡುತ್ತಾರೆಂದು ನಾವು ನಂಬುದಿಲ್ಲ’ ಎಂದು ಹಝ್ರಾ ಶಿಫಾ ತಿಳಿಸಿದರು.
ಕಾಲೇಜಿನಿಂದ ನಮಗೆ ಆಗುತ್ತಿರುವ ತೊಂದರೆ ಯಾರಿಗೂ ಕಾಣುವುದಿಲ್ಲ. ನಮ್ಮನ್ನು ತುಂಬಾ ದ್ವೇಷ ಮಾಡುತ್ತಿದ್ದಾರೆ. ನಿಜವಾಗಿ ನಮ್ಮಿಂದ ಇತರರಿಗೆ ತೊಂದರೆ ಆಗುವುದಲ್ಲ. ನಮಗೆಯೇ ತುಂಬಾ ತೊಂದರೆ ಆಗುತ್ತಿರುವುದು. ನಾವು ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿದ್ದೇವೆ. ಅವರೆಲ್ಲ ತರಗತಿಯಲ್ಲಿ ಕುಳಿತು ಪಾಠ ಕೇಳಿ ಕಲಿಯುತ್ತಿದ್ದಾರೆ. ನಾವು ಇರುವ ಸ್ಥಳದಿಂದ ನಮ್ಮ ತರಗತಿ ಸಾಕಷ್ಟು ದೂರದಲ್ಲಿದೆ. ಹಾಗಿರುವಾಗ ನಮ್ಮಿಂದ ಹೇಗೆ ತೊಂದರೆ ಆಗಲು ಸಾಧ್ಯ’ ಎಂದು ಅವರು ಹೇಳಿದರು.
ನಿಯಮಾವಳಿ ಪತ್ರದಲ್ಲಿ ಹಿಜಾಬ್ ಉಲ್ಲೇಖ ಇಲ್ಲ!
ದಾಖಲಾತಿಯ ಸಂದರ್ಭದಲ್ಲಿ ನಾವು ಸಹಿ ಹಾಕಿರುವ ನಿಯಮಾವಳಿಗಳ ಪತ್ರದಲ್ಲಿ ಸಮವಸ್ತ್ರ ವಿಚಾರ ಇದೆಯೇ ಹೊರತು ಎಲ್ಲೂ ಹಿಜಾಬ್ ಬಗ್ಗೆ ಉಲ್ಲೇಖ ಇಲ್ಲ. ಧಾರ್ಮಿಕ ಆಚರಣೆ ಮಾಡಲು ಇಲ್ಲ ಎಂದು ಅದರಲ್ಲಿ ತಿಳಿಸಲಾಗಿದೆ. ನಾವು ಎಲ್ಲೂ ಆ ರೀತಿ ಆಚರಣೆ ಮಾಡುತ್ತಿಲ್ಲ. ಆದರೆ ಕಾಲೇಜಿ ನವರೇ ಅವರ ಧರ್ಮದ ಆಚರಣೆ ಮಾಡುತ್ತಿದ್ದಾರೆ ಎಂದು ಹಝ್ರಾ ಶಿಫಾ ತಿಳಿಸಿದರು.
‘ಆದರೆ ನಾವು ಅವರ ಧಾರ್ಮಿಕ ಆಚರಣೆಗೆ ಗೌರವ ಕೊಡುತ್ತಿದ್ದೇವೆ. ಪೂಜೆ ನಡೆಯುವಾಗ ನಾವು ಗೌರವ ಕೊಟ್ಟಿದ್ದೇವೆ. ನಾವು ಯಾವುದೇ ಆಕ್ಷೇಪ, ವಿರೋಧ ವ್ಯಕ್ತಪಡಿಸಿಲ್ಲ. ನಾವು ಗೌರವ ಕೊಡುವಾಗ ಅವರು ಕೂಡ ನಮ್ಮ ಹಿಜಾಬ್ಗೆ ಗೌರವ ಕೊಟ್ಟು ತರಗತಿಗೆ ತೆಗೆದುಕೊಳ್ಳಬಹುದಿತ್ತು. ಆದರೆ ಅವರು ಇದನ್ನು ವಿವಾದವನ್ನಾಗಿ ಮಾಡಿಬಿಟ್ಟರೆಂದು ವಿದ್ಯಾರ್ಥಿನಿಯರು ನೋವು ಹೇಳಿಕೊಂಡರು.