ಹಕ್ಕುಗಳ ನಿರಾಕರಣೆ: ಉಡುಪಿ ಸಹಬಾಳ್ವೆಯಿಂದ ಜಿಲ್ಲಾಧಿಕಾರಿಗೆ ಮನವಿ
ಶಾಂತಿ ಕಾಪಾಡಲು ಸಭೆ ನಡೆಸದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ

ಉಡುಪಿ, ಫೆ.7: ಸಮವಸ್ತ್ರದೊಂದಿಗೆ ಕೆಲವು ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸುವ ಕಾರಣಕ್ಕೆ ತರಗತಿ ಪ್ರವೇಶ ನಿರಾಕರಿಸುತ್ತಿರುವುದು ಸಂವಿಧಾನ ಬದ್ಧ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದುದರಿಂದ ವಿದ್ಯಾರ್ಥಿನಿಯರಿಗೆ ಅವರ ಸಂವಿಧಾನ ಬದ್ಧ ಹಕ್ಕುಗಳ ಪ್ರಕಾರ ವಿದ್ಯಾಭ್ಯಾಸ ಮಾಡಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಉಡುಪಿ ಸಹಬಾಳ್ವೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಇಂದು ಮನವಿ ಸಲ್ಲಿಸಲಾಯಿತು.
ಈ ಮನವಿಯನ್ನು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವೀಕರಿಸಿ ದರು. ಈ ವೇಳೆ ಮಾತನಾಡಿದ ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಸಮವಸ್ತ್ರದಲ್ಲಿರುವ ಶಾಲನ್ನು ತಲೆಗೆ ಹಾಕಿಕೊಂಡರೆ ಯಾರಿಗೆ ಏನು ಸಮಸ್ಯೆ ಆಗುತ್ತದೆ. ಅದು ಸಮವಸ್ತ್ರಕ್ಕೆ ಸಂಬಂಧಪಟ್ಟ ಶಾಲು ಆಗಿರುತ್ತದೆ. ಅದು ಬಿಟ್ಟು ಸಮವಸ್ತ್ರಕ್ಕೆ ಸಂಬಂಧಪಡದ ಕೇಸರಿ ಶಾಲು ಹಾಕಿಕೊಂಡು ಬರಲು ಹೇಗೆ ಅವಕಾಶ ಯಾಕೆ ನೀಡಿದ್ದೀರಿ. ಜಿಲ್ಲಾಧಿಕಾರಿಗಳು ಈ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.
‘ಈ ಸಣ್ಣ ವಿಚಾರವನ್ನು ಜಿಲ್ಲಾಡಳಿತ ಮನಸ್ಸು ಮಾಡುತ್ತಿದ್ದಾರೆ ಇಲ್ಲಿಗೆ ಬಗಹರಿಸಬಹುದಿತ್ತು. ಆದರೆ ಆ ಬಗ್ಗೆ ಜಿಲ್ಲಾಡಳಿತ ಯಾವುದೇ ಮನಸ್ಸು ಮಾಡದಿರುವ ಬಗ್ಗೆ ನಮಗೆಲ್ಲ ಅಸಮಾಧಾನ ಇದೆ. ಇತ್ತೀಚಿನ ಕೆಲವು ದಿನಗಳಿಂದ ಜಿಲ್ಲೆಯ ಕಾಲೇಜು ವಿದ್ಯಾರ್ಥಿನಿಯರಿಗೆ ಸಂವಿಧಾನ ಬದ್ಧ ಹಕ್ಕು ಗಳನ್ನು ನಿರಾಕರಿಸಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿದ್ದು, ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ’ ಎಂದು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದರು.
ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕೂಡಲೇ ಎಲ್ಲ ಸಮುದಾಯದವರ ಸಭೆ ಕರೆದು ಚರ್ಚಿಸಬೇಕು. ಮೊದಲೇ ಸಭೆ ಕರೆಯುತ್ತಿದ್ದರೆ ಈ ಸಣ್ಣ ವಿಚಾರವನ್ನು ಇಲ್ಲಿಯೇ ಮುಗಿಸಬಹುದಿತ್ತು. ಶೀಘ್ರವೇ ಸಭೆ ಕರೆಯ ದಿದ್ದರೆ ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೋಟ ಇಬ್ರಾಹಿಂ ಸಾಹೇಬ್, ಕ್ರೈಸ್ತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ್ ಗೊಲ್ಲ, ಚಿಂತಕ ಪ್ರೊ.ಫಣಿರಾಜ್, ಯಾಸೀನ್ ಮಲ್ಪೆ, ಮುಹಮ್ಮದ್ ಮೌಲಾ, ಹುಸೇನ್ ಕೋಡಿಬೆಂಗ್ರೆ, ಜಯಶ್ರೀ, ರೇಷ್ಮಾ, ಅಫ್ವಾನ್ ಹೂಡೆ, ಅಬ್ದುಲ್ ಅಝೀಝ್ ಉದ್ಯಾವರ, ಅನ್ವರ್ ಅಲಿ ಕಾಪು ಮೊದಲಾದ ವರು ಉಪಸ್ಥಿತರಿದ್ದರು.