ರೌಡಿ ಶೀಟರ್ ಆಕಾಶಭವನ ಶರಣ್, ಪಿಂಕಿ ನವಾಝ್ ವಿರುದ್ಧ ಗೂಂಡಾ ಕಾಯ್ದೆ : ಕಮಿಷನರ್ ಶಶಿಕುಮಾರ್

ಆಕಾಶಭವನ ಶರಣ್ - ಪಿಂಕಿ ನವಾಝ್
ಮಂಗಳೂರು : ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಅತ್ಯಾಚಾರ ಸೇರಿದಂತೆ ಗಂಭೀರ ಪರರಣಗಳಲ್ಲಿ ವಿವಿಧ ಠಾಣೆಗಳಲ್ಲಿ ರೌಡಿಶೀಟರ್ಗಳಾಗಿರುವ ಆಕಾಶಭವನ ಶರಣ್ ಅಲಿಯಾಸ್ ರೋಹಿದಾಸ್ (37) ಹಾಗೂ ನವಾಝ್ ಅಲಿಯಾಸ್ ಪಿಂಕಿ ನವಾಝ್ (27) ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಬಂಧನಕ್ಕೆ ಆದೇಶಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಇಂದು ಮಾಹಿತಿ ನೀಡಿದ ಎನ್. ಶಶಿಕುಮಾರ್, ಕೋಮು ಸಾಮರಸ್ಯ ಕಾಪಾಡುವುದು ಹಾಗೂ ಸಮಾಜ ವಿದ್ರೋಹದ ಪರಿಸ್ಥಿತಿಯಿಂದ ರಕ್ಷಣೆಯ ಸಲುವಾಗಿ ತಮಗಿರುವ ಅಧಿಕಾರವನ್ನು ಚಲಾಯಿಸಿ ಈ ಗೂಂಡಾ ಕಾಯ್ದೆಯನ್ನು ಈ ಇಬ್ಬರು ಆರೋಪಿಗಳ ವಿರುದ್ಧ ಹೇರಿರುವುದಾಗಿ ತಿಳಿಸಿದರು.
ಆರೋಪಿ ಶರಣ್ ಆಕಾಶಭವನ ವಿಜಯಪುರ ಜೈಲಿನಲ್ಲಿದ್ದು, ಮೈಸೂರು ಜೈಲಿನಿಂದ ಬಿಡುಗಡೆಯಾಗುತ್ತಿರುವ ಪಿಂಕಿ ನವಾಝ್ನನ್ನು ವಶಕ್ಕೆ ಪಡೆದು ಗೂಂಡಾ ಕಾಯ್ದೆಯಡಿ ಬಂಧಿಸುತ್ತಿರುವುವುದಾಗಿ ಅವರು ಹೇಳಿದರು .ನಗರದಲ್ಲಿ ಯಾವುದೇ ಅಹಿತರಕ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ವೇಳೆ ಮನಪರಿವರ್ತನೆ ಮಾಡಿಕೊಂಡವರ ಹೆಸರನ್ನು ರೌಡಿ ಶೀಟ್ನಿಂದ ತೆರವುಗೊಳಿಸುವ ಕಾರ್ಯವನ್ನೂ ಮಾಡಲಾಗುತ್ತಿದೆ. ಸಮಾಜ ವಿದ್ರೋಹಿ ಕೃತ್ಯ ಮಾಡುವವರು ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಭಂಗ ತರುವವರ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ.
ಆಕಾಶಭವನ ಕಾಪಿಗುಡ್ಡೆ ಕ್ರಾಸ್ ನಿವಾಸಿಯಾಗಿರುವ ಶರಣ್ ವಿರುದ್ಧ 2008ರಿಂದ 2022ರವರೆಗೂ ದ.ಕ., ಉಡುಪಿ ಸೇರಿದಂತೆ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ನಾಲ್ಕು ಕೊಲೆ ಪ್ರಕರಣಗಳು, ಕೊಲೆ ಪ್ರಯತ್ನ, ಮಾರಣಾಂತಿಕ ಹಲ್ಲೆ, ಪೊಲೀಸರ ಮೇಲೆ ಹಲ್ಲೆ, ಅತ್ಯಾಚಾರ, ಅಪ್ರಾಪ್ತ ಬಾಲಕಿಯ ಅತ್ಯಾಚಾರ ಯತ್ನ, ದರೋಡೆ ಯತ್ನ, ಸುಲಿಗೆ ಪ್ರಕರಣ ಸೇರಿ ಮಂಗಳೂರು ನಗರದಲ್ಲೇ 15 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದೆ. 2018ರಲ್ಲಿ ಕಿರುತೆರೆ ನಟ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಇತ್ತೀಚೆಗೆ ಜೈಲಿನಿಂದ ಹೊರಬಂದ ಬಳಿಕವೂ ಮತ್ತೆ ಎರಡು ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ನಡೆದ ಸುಲಿಗೆ ಪ್ರಕರಣದ ಪ್ರಮುಖ ಸೂತ್ರದಾರ ಈತನಾಗಿದ್ದು, ತನ್ನ ವಿರೋಧಿಗಳಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆಯೂ ದೂರು ದಾಖಲಾಗಿದೆ. ಜೈಲಿನೊಳಗೆ ಇದ್ದುಕೊಂಡು ಕೆಲ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಗೂಂಡಾಕಾಯ್ದೆ ಹಾಕಲಾಗುತ್ತಿದೆ ಎಂದು ಅವರು ಹೇಳಿದರು.
ಕಾಟಿಪಳ್ಳ ನಿವಾಸಿಯಾಗಿರುವ ಪಿಂಕಿ ನವಾಝ್ ಕೊಲೆಯತ್ನ, ಸುಲಿಗೆ, ದರೋಡೆ ಸೇರಿದಂತೆ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ನಾಲ್ಕು ವರ್ಷಗಳ ಹಿಂದೆ ದೀಪಕ್ ರಾವ್ ಕೊಲೆಯಾದ ಬಳಿಕ ಸ್ಥಳೀಯ ಕಾರ್ಪೊರೇಟರ್ಗೆ ಕೊಲೆ ಬೆದರಿಕೆ, ಸಾಕ್ಷಿ ಮೇಲೆ ಒತ್ತಡ ಹೇರುವ ಪ್ರಕರಣವೂ ದಾಖಲಾಗಿದೆ. ಈತ ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದು, ಮತ್ತೆ ಸಹಚರರ ಜತೆ ಸೇರಿಕೊಂಡು ಕೋಮು ಗಲಭೆ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈತನ ವಿರುದ್ಧ ಗೂಂಡಾಕಾಯ್ದೆ ಹೇರಲಾಗುತ್ತಿದೆ ಎಂದು ಅವರು ಹೇಳಿದರು.
ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ಎಸಿಪಿ ಮಹೇಶ್ ಕುಮಾರ್, ರಾಘವ ಪಡೀಲ್ ಮೊದಲಾದವರು ಉಪಸ್ಥಿತರಿದ್ದರು.