ಮಂಗಳೂರಿನ ಸತೀಶ್ ಮುಕುಂದ್ ಗಲ್ಫ್‌ನಲ್ಲಿ ಮೃತ್ಯು; ಮೃತದೇಹ ಊರಿಗೆ ಸಾಗಿಸಲು ಕೆಸಿಎಫ್ ನೆರವು

ಮಂಗಳೂರು, ಫೆ.10: ಕೆಲವು ದಿನಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಮೃತಪಟ್ಟ ನಗರದ ನಂತೂರಿನ ಸತೀಶ್ ಮುಕುಂದ್ (62) ಅವರ ಮೃತದೇಹವನ್ನು ಊರಿಗೆ ಸಾಗಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ನೆರವು ನೀಡಿದೆ.
ಸೌದಿ ಅರೇಬಿಯಾದ ದಮಾಮ್ ನ ಅಲ್ ಕುಸ್ಸಿ ಎಂಬ ಕಂಪೆನಿಯಲ್ಲಿ ಸತೀಶ್ ಮುಕುಂದ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. 3 ತಿಂಗಳ ಹಿಂದೆ ಅನಾರೋಗ್ಯದಿಂದ ಕಿಂಗ್ ಫಹದ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಸಿಎಫ್ ದಮಾಮ್ ಸಾಂತ್ವನ ತಂಡವು ಮಾನವೀಯ ನೆಲೆಯಲ್ಲಿ ಸತೀಶ್ ಮುಕುಂದ್ ಆಸ್ಪತ್ರೆಗೆ ದಾಖಲಾದಾಗಿನಿಂದ ಹಿಡಿದು ನಿರಂತರ ಸಂಪರ್ಕ ದಲ್ಲಿದ್ದುಕೊಂಡು ಅವರನ್ನು ದಿನನಿತ್ಯ ಭೇಟಿ ನೀಡಿ ಆಹಾರದ ವ್ಯವಸ್ಥೆ ಸಹಿತ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಪೂರೈಸುತ್ತ ಬಂದಿತ್ತು ಎಂದು ಕೆಸಿಎಫ್ ಮುಖಂಡರು ಮಾಹಿತಿ ನೀಡಿದ್ದಾರೆ.
ಆದರೆ ಸತೀಶ್ ಮುಕುಂದ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮೃತದೇಹವನ್ನು ಊರಿಗೆ ಕಳುಹಿಸಲು ಕೆಸಿಎಫ್ ಸಾಂತ್ವನ ತಂಡವು ಸೌದಿಯ ಭಾರತೀಯ ರಾಯಭಾರಿ ಕಚೇರಿ ಹಾಗು ಸೌದಿ ಸರಕಾರದ ಕಚೇರಿಯ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸಿ ಮೃತದೇಹವನ್ನು ಊರಿಗೆ ಕಳುಹಿಸಿಕೊಡುವಲ್ಲಿ ಸಹಕರಿಸಿದೆ.
ಮೃತದೇಹವವನ್ನು ದಮಾಮ್‌ನಿಂದ ಸಾಗಿಸಲಾಗಿದೆ. ಶುಕ್ರವಾರ ಮಂಗಳೂರಿಗೆ ತಲುಪುವ ಸಾಧ್ಯತೆ ಇದೆ. ಕಷ್ಟಕಾಲದಲ್ಲಿ ಕೆಸಿಎಫ್ ತಂಡವು ನಮಗೆ ಎಲ್ಲಾ ರೀತಿಯ ನೆರವು ನೀಡಿದೆ ಎಂದು ಸತೀಶ್ ಮುಕುಂದ್ ಕುಟುಂಬಸ್ಥರು ತಿಳಿಸಿದ್ದಾರೆ.
ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ. ಯೂಸುಫ್ ಸಖಾಫಿ ಬೈತಾರ್, ದಮಾಮ್ ಸಾಂತ್ವನ ವಲಯ ವಿಭಾಗದ ನಾಯಕರಾದ ಬಾಷಾ ಗಂಗಾವಳಿ, ತಮೀಮ್ ಕೂಳೂರು, ನಾರ್ತ್ ಸೆಕ್ಟರ್ ಕಾರ್ಯದರ್ಶಿ ಹನೀಫ್ ಮೂಡುಬಿದಿರೆ, ಕೆಸಿಎಫ್ ದಮಾಮ್ ವಲಯದ ಇಬ್ಬು ಬಜ್ಪೆ ಮತ್ತಿತರರು ಸಹಕರಿಸಿದ್ದರು.